ಸಾರಾಂಶ
ಶಿವರಾತ್ರಿ ನಿಮಿತ್ತ ಬೀದರ್‌ನ ಪಾಪನಾಶ ದೇವಸ್ಥಾನಕ್ಕೆ ವಿವಿಧೆಡೆಯಿಂದ ಭಕ್ತರ ಆಗಮನ, ದರ್ಶನಕ್ಕೆ ಭಕ್ತರ ಉದ್ದನೆಯ ಸಾಲು, ಭಕ್ತರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಮಹಾ ಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಪೂಜೆಗಾಗಿ ಇಲ್ಲಿನ ಪವಿತ್ರ ಪಾಪನಾಶ ಲಿಂಗ ದೇವಸ್ಥಾನಕ್ಕೆ ನಗರ ಸೇರಿ ಜಿಲ್ಲೆ ವಿವಿಧೆಡೆಯಿಂದ ಭಕ್ತರ ದಂಡು ಹರಿದು ಬಂತು.ಮಹಾ ಶಿವರಾತ್ರಿಯಂದು ಶಿವನ ಜನ್ಮವಾಗಿದ್ದು, ಅಂದಿನ ದಿನ ಪೂಜೆ ಸಲ್ಲಿಸಿದರೆ ಇಡೀ ವರ್ಷ ಮನುಷ್ಯನಿಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದ್ದು, ಹೀಗಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಭಕ್ತರ ದಂಡು ದೇವಸ್ಥಾನಕ್ಕೆ ತೆರಳಿ ಅಲ್ಲಿನ ಶಿವನಲಿಂಗಕ್ಕೆ ಪೂಜೆ ಮಾಡಿದರು.
ಇಡೀ ದಿನ ಪೂಜೆ ಪುನಸ್ಕಾರ ನಡೆಯುವದಲ್ಲದೇ ರಾತ್ರಿ ದೇವರ ಧ್ಯಾನದಲ್ಲಿ ಕಳೆದರು. ಪಾಪನಾಶ ದೇವಸ್ಥಾನದ ದರ್ಶನಕ್ಕೆ ಬಂದಿರುವ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಗಣ್ಯರಿಂದ ಹಣ್ಣು ಹಂಪಲು ಕೂಡ ವಿತರಿಸಲಾಯಿತು.ಶಿವರಾತ್ರಿ ದಿನದಂದು ಉಪವಾಸ ಇರುವುದರಿಂದ ಬಹುತೇಕ ಜನರು ದೇವರ ಧ್ಯಾನದಲ್ಲಿಯೇ ಇಡೀ ದಿನ ಕಳೆಯುತ್ತಾರೆ ನಂತರ ಹಣ್ಣು ಹಂಪಲುಗಳನ್ನು ಸೇವಿಸುವ ರೂಢಿ ಇದೆ.
ಶಿವರಾತ್ರಿ ಪೂಜೆಗಾಗಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ಪೊಲೀಸ್ ಇಲಾಖೆಯಿಂದ ಕೂಡ ಜನ ದಟ್ಟಣೆಯಾಗದಂತೆ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ ಶಿವಲಿಂಗ ಪೂಜೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಲಾಗಿತ್ತು.