ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕೊಡುಗೆ ಅಪಾರ

| Published : Sep 08 2025, 01:00 AM IST

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜೆಎಸ್‌ಎಸ್ ಸಮುಚ್ಚಯದ ಶಿಕ್ಷಣ ಸಂಸ್ಥೆಗಳು, ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆ ಮೈಸೂರು ಹಾಗೂ ಕಿದ್ವಾಯಿ ಸ್ಮಾರಕ ಆಸ್ಪತ್ರೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೦ನೇ ಜಯಂತಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಬೃಹತ್ ಆರೋಗ್ಯ ಉಚಿತ ತಪಾಸಣಾ ಮತ್ತು ರಕ್ತದಾನ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜೆಎಸ್‌ಎಸ್ ಸಮುಚ್ಚಯದ ಶಿಕ್ಷಣ ಸಂಸ್ಥೆಗಳು, ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆ ಮೈಸೂರು ಹಾಗೂ ಕಿದ್ವಾಯಿ ಸ್ಮಾರಕ ಆಸ್ಪತ್ರೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೦ನೇ ಜಯಂತಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಬೃಹತ್ ಆರೋಗ್ಯ ಉಚಿತ ತಪಾಸಣಾ ಮತ್ತು ರಕ್ತದಾನ ಶಿಬಿರ ನಡೆಯಿತು.

ನಗರದ ಜೋಡಿ ರಸ್ತೆಯಲ್ಲಿರುವ ಸಿದ್ದಮಲ್ಲೇಶ್ವರ ವಿರಕ್ತ ಮಠದ ಬಸವರಾಜಸ್ವಾಮಿಗಳವರ ಅನುಭವ ಮಂಟಪದಲ್ಲಿ ನಡೆದ ಶಿಭಿರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ನೊಂದಾವಣೆ ಮಾಡಿಸಿಕೊಂಡು ಅರೋಗ್ಯ ತಪಾಸಣೆ ಮಾಡಿಸಿಕೊಂಡರೆ ಯುವಕರು ರಕ್ತದಾನ ಮಾಡಿದರು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕಿವಿ, ಮೂಗು ಮತ್ತು ಗಂಟಲು, ಕಣ್ಣಿನ ತೊಂದರೆಗಳು, ರಕ್ತದೊತ್ತಡ ಹಾಗೂ ಮಧುಮೇಹ. ವಾತಪಿತ್ತ (ಗ್ರಾಸ್ಟಿಕ್) ಮೂಳೆಗೆಸ ಸಂಬಂಧಿಸಿದ ತೊಂದರೆಗಳು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಮಕ್ಕಳ ತಜ್ಞರು ಮತ್ತು ಸಲಹೆ, ಸ್ತ್ರೀ ರೋಗ ತಜ್ಞರು, ದಂತ ವೈದ್ಯರು, ಕ್ಯಾನ್ಸರ್‌ಗೆ ಸಂಬಂಧಪಟ್ಟ ತಪಾಸಣೆ ಹಾಗೂ ವಿಕಲಚೇತನರಿಗೆ ಅವಶ್ಯವಿರುವ ಸಲಹೆ ಸೂಚನೆಗಳನ್ನು ನೀಡಿ ಕೆಲವು ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.

ಯುವ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಿತು ೬೦ಕ್ಕೂ ಹೆಚ್ಚು ಮಂದಿ ಯುವಕರು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು.

ಶಿಬಿರಕ್ಕೆ ಚಾಲನೆ ನೀಡಿದ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹಾಗೂ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ಮಾತನಾಡಿ, ಸಮಾಜಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಕೊಡುಗೆ ಅಪಾರವಾದದ್ದು ಎಂದರು.

ಶಿಕ್ಷಣ, ಅನ್ನದಾಸೋಹ, ಆರೋಗ್ಯ ಕ್ಷೇತ್ರದಲ್ಲಿ ಜೆಎಸ್‌ಎಸ್ ಸಂಸ್ಥೆ ಸಾಧನೆ ಮಾಡಲು ರಾಜೇಂದ್ರ ಮಹಾಸ್ವಾಮಿಗಳ ದೂರದೃಷ್ಟಿಯೇ ಕಾರಣ, ಜಿಲ್ಲೆಯ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಚಾಮರಾಜವಗರದಲ್ಲಿ ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಯನ್ನು ತೆರೆದರು, ಅದರ ಫಲವಾಗಿ ಇಂದು ಸಂಸ್ಥೆ ಇಲ್ಲಿ ಹೆಮ್ಮರವಾಗಿ ಬೆಳೆದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಾಧ್ಯವಾಯಿತು ಎಂದರು.

ಈ ನಿಟ್ಟಿನಲ್ಲಿ ಅವರ ೧೧೦ನೆಯ ಜಯಂತಿ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಕೊಡಸೋಗೆ ಶಿವಬಸಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಜೆಎಸ್‌ಎಸ್ ಆಸ್ಪತ್ರೆ ಹಾಗೂ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಸುಮಾರು ೪೦ಕ್ಕೂ ಹೆಚ್ಚು ನುರಿತ ವೈದ್ಯರು ಭಾಗವಹಿಸಿದ್ದರು.

ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಮೂಡುಗೂರು ಮಠದ ಇಮ್ಮಡಿ ಉದ್ದಾನಸ್ವಾಮೀಜಿ, ಕಬ್ಬಹಳ್ಳಿ ಮಠದ ಗುರುಸಿದ್ದಸ್ವಾಮೀಜಿ, ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಯುವ ಘಟಕದ ಜಿ. ಗುರುಪ್ರಸಾದ್, ಜೆಎಸ್‌ಎಸ್ ಕಾಲೇಜಿನ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ, ನಗರದ ಜೆಎಸ್‌ಎಸ್ ಆಸ್ಪತ್ರೆಯ ಮಲ್ಲಿಕಾರ್ಜುನ್, ಮುಖಂಡರಾದ ಬಿ.ಕೆ. ರವಿಕುಮಾರ್, ಬಿ.ಎಂ.ಪ್ರಭುಸ್ವಾಮಿ, ಕೊಡಸೋಗೆ ಬಸವಣ್ಣ, ಕೊಳ್ಳೇಗಾಲದ ಮುರಡೇಶ್ವರಸ್ವಾಮಿ, ಕಾರ್ಯದರ್ಶಿ ಗಾಯಿತ್ರಿ, ನಿರಂಜನಮೂರ್ತಿ, ಬಾಲಚಂದ್ರಮೂರ್ತಿ, ಮಹದೇವಸ್ವಾಮಿ,ಮಹಿಳಾ ಘಟಕದ ರತ್ನಮ್ಮ ಉಪಸ್ಥಿತರಿದ್ದರು.