ಸಾರಾಂಶ
ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ, ದೇವರಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ನೈವೇದ್ಯ ಪೂಜೆ ನಡೆಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಸುತ್ತಮುತ್ತಲ ದೇವಸ್ಥಾನಗಳಲ್ಲಿ ಶುಕ್ರವಾರ ಶಿವರಾತ್ರಿಯ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ಶ್ರದ್ಧಾಭಕ್ತಿಯಿಂದ ನೇರವೇರಿದ್ದವು.ಕಂಬಿಬಾಣೆ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ನೈವೇದ್ಯ ಪೂಜೆ ನಡೆದು ನಂತರ ನೆರದಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು.ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯ ನಂತರ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ್ ರೈ, ಕಾರ್ಯದರ್ಶಿ ಗಣೇಶ್, ಖಜಾಂಚಿ ಅಜಿತ್, ಹಾಗೂ ಸಮಿತಿಯ ಪದಾಧಿಕಾರಿಗಳಾದ ಜಯಂತ್, ರವಿ, ಸುಬ್ರಯ, ಚಿದಾನಂದ, ಗಂಗಾಧರ, ಮಂಜುನಾಥ್ ರೈ ಮತ್ತಿತರರು ಹಾಜರಿದ್ದರು.ಸುಂಟಿಕೊಪ್ಪ, ಕೊಡಗರಹಳ್ಳಿ, ಪನ್ಯ, ಉಪ್ಪುತೋಡು, ಕಂಬಿಬಾಣೆ, ಕುಶಾಲನಗರದಿಂದ ಭಕ್ತರು ಆಗಮಿಸಿ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದರು.
ಸಮೀಪದ ಕೊಡಗರಹಳ್ಳಿ, ಶ್ರೀ ಬೈತೂರಪ್ಪ ಪೊವ್ಚದಿ, ಬಸವೇಶ್ವರ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ವಿಶೇಷ ಪೂಜೆ ಆರಾಧನೆ ನಡೆಯಿತು.ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.ಕಂಬಿಬಾಣೆ ವಿಶ್ವನಾಥ ದೇವಾಲಯ, ನಾಕೂರು ಶಿವ ದೇವಾಲಯ, ಕೆದಕಲ್ ಭದ್ರಕಾಳಿ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಮಧ್ಯಾಹ್ನ ವಿಶೇಷ ಪೂಜಾ ಕಾರ್ಯಗಳು ನಡೆದವು.