ಶಿಕ್ಷಕರು ಹೇಳಿದ ಮಾತು ಮಾತ್ರ ಆಲೋಚನೆಯನ್ನು ಹುಟ್ಟಿಸುವುದಿಲ್ಲ, ಅದನ್ನು ನೀವು ಹೇಗೆ ಕೇಳುತ್ತೀರಿ, ಹೇಗೆ ಚಿಂತಿಸುತ್ತೀರಿ ಮತ್ತು ನಿಮ್ಮ ಮನಸ್ಸು ಅದನ್ನು ಹೇಗೆ ವಿಶ್ಲೇಷಿಸುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಆಲೋಚನೆಯೇ ಎಲ್ಲದರ ಆರಂಭ. ಆಲೋಚನೆ ಯಾವಾಗಲೂ ಪಠ್ಯಪುಸ್ತಕದಲ್ಲಿ ನೇರವಾಗಿ ಸಿಗುವುದಿಲ್ಲ. ಕೆಲವೊಮ್ಮೆ ಅದು ಪಠ್ಯಪುಸ್ತಕದ ಸಾಲುಗಳ ನಡುವೆ ಹುಟ್ಟುತ್ತದೆ. ಕೆಲವೊಮ್ಮೆ ಶಿಕ್ಷಕರು ತರಗತಿಯಲ್ಲಿ ಮಾತನಾಡುತ್ತಿರುವಾಗ ನಿಮ್ಮ ಮನಸ್ಸಿನಲ್ಲಿ ಹೊಸ ಪ್ರಶ್ನೆಯಾಗಿ ಮೂಡುತ್ತದೆ ಎಂದು ವಿಶ್ರಾಂತ ಕುಲಪತಿ ಡಾ.ಪಿ. ನಾಗಭೂಷಣ್ ತಿಳಿಸಿದರು.ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್ಎಸ್- ಅಹೆರ್ ನಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 111ನೇ ಜಯಂತಿ ಅಂಗವಾಗಿ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಮಂಗಳವಾರ ಆಯೋಜಿಸಿದ್ದ ಸೃಜನ- 2026 ವಿಜ್ಞಾನ ಮಾದರಿಗಳ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಹೇಳಿದ ಮಾತು ಮಾತ್ರ ಆಲೋಚನೆಯನ್ನು ಹುಟ್ಟಿಸುವುದಿಲ್ಲ, ಅದನ್ನು ನೀವು ಹೇಗೆ ಕೇಳುತ್ತೀರಿ, ಹೇಗೆ ಚಿಂತಿಸುತ್ತೀರಿ ಮತ್ತು ನಿಮ್ಮ ಮನಸ್ಸು ಅದನ್ನು ಹೇಗೆ ವಿಶ್ಲೇಷಿಸುತ್ತದೆ ಎಂಬುದರಲ್ಲಿಯೂ ಆಲೋಚನೆ ಹುಟ್ಟುತ್ತದೆ. ಆ ಆಲೋಚನೆಯನ್ನು ನೀವು ಒಂದು ಉಪಕರಣವಾಗಿ, ಉತ್ಪನ್ನವಾಗಿ ಅಥವಾ ಕಾರ್ಯರೂಪದ ಚಟುವಟಿಕೆಯಾಗಿ ಪರಿವರ್ತಿಸಿದರೆ, ಅದು ಸಾಮಾನ್ಯ ಕೌಶಲವಲ್ಲ. ಅದು ಬೌದ್ಧಿಕ ಕೌಶಲ. ಕೌಶಲವೆಂದರೆ ಜ್ಞಾನವನ್ನು ಕ್ರಿಯೆಯಾಗಿ, ಕಾರ್ಯಕ್ಷಮತೆಯಾಗಿ, ಉತ್ಪನ್ನವಾಗಿ ಅಥವಾ ಸೇವೆಯಾಗಿ ಪರಿವರ್ತಿಸುವ ಆಂತರಿಕ ಬೌದ್ಧಿಕ ಅಭ್ಯಾಸ ಎಂದು ಅವರು ಹೇಳಿದರು.ಕೌಶಲವು ನಿಮ್ಮೊಳಗಿಂದಲೇ ಬರಬೇಕು. ಅದನ್ನು ಹೊರಗಿನಿಂದ ಬಲವಂತವಾಗಿ ಕಲಿಸಲು ಸಾಧ್ಯವಿಲ್ಲ. ಬುದ್ಧಿವಂತಿಕೆಯೂ ಆಂತರಿಕವಾಗಿರಬೇಕು. ನಿಮ್ಮ ಜ್ಞಾನವನ್ನು ನೀವು ಸ್ವಂತವಾಗಿಸಿಕೊಂಡಾಗ ಮಾತ್ರ ಅದು ನಿಜವಾದ ಸಾಮರ್ಥ್ಯವಾಗಿ ರೂಪುಗೊಳ್ಳುತ್ತದೆ ಎಂದರು.
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್. ಬಸವನಗೌಡಪ್ಪ, ಲೈಫ್ ಸೈನ್ಸಸ್ ಡೀನ್ ಫ್ಯಾಕಲ್ಟಿ ಪ್ರೊ.ಕೆ.ಎ. ರವೀಶ್, ಸಂಘಟನಾ ಕಾರ್ಯದರ್ಶಿ ಸುಶಾಂತ್ ಸಾವಂತ್ ಇದ್ದರು.