ಹೂವಿನಂತಹ ಬದುಕು ಸಾಗಿಸಿದ ಶಿವಶಾಂತವೀರ ಶ್ರೀಗಳು: ಸಂಗಮೇಶ್ವರ ಶ್ರೀ

| Published : Apr 04 2024, 01:00 AM IST

ಹೂವಿನಂತಹ ಬದುಕು ಸಾಗಿಸಿದ ಶಿವಶಾಂತವೀರ ಶ್ರೀಗಳು: ಸಂಗಮೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಹೂವಿನಂತಹ ಬದುಕು ಸಾಗಿಸಿದವರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಹೂವಿನಂತಹ ಬದುಕು ಸಾಗಿಸಿದವರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ಗವಿಮಠದ ಕೆರೆಯ ದಡದಲ್ಲಿ ನಡೆದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಗುರುಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಳ್ಳಿಯಲ್ಲಿನ ಮೊಗ್ಗಿಗೆ ಸೂರ್ಯನ ಕಿರಣ ಸ್ಪರ್ಶವಾಗುತ್ತಿದಂತೆ ಹೂವಾಗಿ ಅರಳಿತು, ಅರಳಿದ ಬಳಿಕ ಸುತ್ತಮುತ್ತ ಸುವಾಸನೆ ಬೀರಲಾರಂಭಿಸುತ್ತದೆ. ಸನ್ಯಾಸಿ ಬರಲಿ, ಸಂಸಾರಿ ಬರಲಿ, ದೊಡ್ಡವರು ಬರಲಿ, ಸಣ್ಣವರು ಬರಲಿ ಅದು ಸುವಾಸನೆ ಬಿರುತ್ತದೆ. ಯಾವುದೇ ಧರ್ಮದವರು ಬಂದರೂ ಪರಿಮಳವನ್ನೇ ನೀಡುತ್ತದೆ ಹೊರತು, ಬೇರೆ ಏನನ್ನು ನೀಡುವುದಿಲ್ಲ.

ಅದೇ ಹೂವನ್ನು ಪೂಜಾರಿ ಕಿತ್ತುಕೊಂಡು ಹೋಗಿ, ದೇವರಿಗೆ ಅರ್ಪಿಸಿದ ಮೇಲೆ ಅದು ಸಾರ್ಥಕತೆ ಪಡೆದುಕೊಳ್ಳುತ್ತದೆ. ಮುತ್ತೈದೆಯರು ಬಂದು ಕಿತ್ತುಕೊಂಡು ಮುಡಿದಾಗಲೂ ಅದು ಸಾರ್ಥಕತೆ ಪಡೆದುಕೊಳ್ಳುತ್ತದೆ. ಅದೇ ಹೂ ಸೂರ್ಯಾಸ್ತವಾಗುತ್ತಿದ್ದಂತೆ ಬಾಡಿ ಹೋಗುತ್ತದೆ. ಆದರೆ, ಹೂ ಬದುಕಿದ್ದು ಕೇವಲ ಒಂದು ದಿನ ಮಾತ್ರ. ಮಧ್ಯೆ ಎಲ್ಲರಿಗೂ ಬೇಕಾಗುವ ಬದುಕು ಸಾಗಿಸಿತು. ಇಂಥ ಹೂ ಯಾರಿಗೆ ಬೇಡ ಹೇಳಿ, ಹೂ ಇಷ್ಟಪಡದವರು ಯಾರಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದರು.

ಇಂಥ ಹೂ ಮನುಷ್ಯನ ಕುರಿತು ಪ್ರಶ್ನೆ ಮಾಡುತ್ತದೆ. ನಾನು ಇದೇ ಜಗತ್ತಿನಲ್ಲಿಯೇ ಇದ್ದೇನೆ, ಒಂದು ದಿನ ಇದ್ದರೂ ಎಲ್ಲರಿಗೂ ಬೇಕಾಗುವಂತೆ ಬಾಳಿದ್ದೇನೆ, ನೀನು ನೂರು ವರ್ಷ ಬದುಕುವ ಮನುಷ್ಯ ಯಾರಿಗೆ ಬೇಕಾಗಿದ್ದಿಯಾ ಎಂದು ಪ್ರಶ್ನೆ ಮಾಡುತ್ತದೆ. ಆದರೆ, ಹೂವಿನ ಬದುಕು ಸಾಗಿಸಿದವರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು. ಅವರ ಬದುಕು ಹೂವಿನಂತಹ ಬದುಕು. ಸಾರ್ಥಕತೆಯ ಬದುಕು, ಸೇವೆಯ ಬದುಕು. ಅಂಥವರ ಸ್ಮರಣೆ ಮಾಡುವುದು ನಿಜವಾದ ಸಾರ್ಥಕತೆ ಎಂದರು.

ಕಣ್ಣಿಗೆ ಕಾಣುವ ಜಗತ್ತು ದೇವರು ನಿರ್ಮಿಸಿರುವ ಜಗತ್ತು. ಇಲ್ಲಿ ಅಸಂಖ್ಯಾತ ಜೀವರಾಶಿಗಳು ಇವೆ. ಇದರಲ್ಲಿ ಯಾರು ದೊಡ್ಡವರು ಎಂದರೇ, ಸಂಪತ್ತು ಗಳಿಸಿದವರು ದೊಡ್ಡವರು ಅಲ್ಲ. ಬೆಳ್ಳಿ, ಬಂಗಾರ ಗಳಿಸಿದವರು ದೊಡ್ಡವರಲ್ಲ, ರಾಜರು ದೊಡ್ಡವರು ಅಲ್ಲ, ಹೆತ್ತ ತಾಯಿ-ತಂದೆಯರು ದೊಡ್ಡವರು ಅಲ್ಲ. ಜಗತ್ತಿನ ಉದ್ಧರಿಸುವ ಗುರುಗಳು ನಿಜವಾದ ದೊಡ್ಡವರು. ಈ ಲೋಕದ ಭವನ, ಬಂಧನದಿಂದ ಮುಕ್ತಿ ನೀಡುವ ಗುರುವೇ ಶ್ರೇಷ್ಠ ಎಂದರು.

ಉಪ್ಪಿನ ಬೆಟಗೇರಿ ಗ್ರಾಮದ ಶ್ರೀ ಕುಮಾರ ವಿರುಪಾಕ್ಷೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಶಿವರುದ್ರ ಗೋಡವಾಗಿ ಅವರ ಸಂಗೀತ ಕಾರ್ಯಕ್ರಮ ಸೇರಿದ್ದ ಜನರನ್ನು ಮಂತ್ರಮುಗ್ದರನ್ನಾಗಿಸಿತು.