ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕೈಲಾಸಕ್ಕಿಂತ ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕನ್ನು ಕಂಡುಕೊಳ್ಳಬೇಕೆಂದು ಮಾಡಾಳು ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು. ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರು ಮೊದಲಿನಿಂದಲೂ ಅರ್ಥವಿಲ್ಲದ ಸಂಪ್ರದಾಯಗಳ, ಮೂಢನಂಬಿಕೆ, ಗೊಡ್ಡು ಆಚರಣೆಗಳ ಬಗ್ಗೆ ವೈಚಾರಿಕ ನೆಲೆಗಟ್ಟಿನಲ್ಲಿ ಅರಿವು ಮೂಡಿಸುತ್ತಿದ್ದರು. ಜನರಿಗೆ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ, ವ್ಯಕ್ತಿತ್ವ ವಿಕಸನವನ್ನುಂಟು ಮಾಡಿದರು ಎಂದರು,ಹನ್ನೆರಡನೇ ಶತಮಾನದಲ್ಲಿಯೇ ಮಹಿಳೆಯರಿಗೆ ಬಸವಣ್ಣನವರು ಸ್ವಾತಂತ್ರ್ಯತಂದುಕೊಟ್ಟ ಫಲವಾಗಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಇವರ ದಾಸೋಹ, ಕಾಯಕ ನಿಷ್ಠೆ, ವೈಚಾರಿಕೆ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಈ ಬಗ್ಗೆ ಚಿಂತಿಸಬೇಕು. ಎಲ್ಲರಿಗೂ ಒಂದೇ ಕಾನೂನಾತ್ಮಕ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜಕೀಯ ಮುಖಂಡರು, ಸಮಾಜದ ಚಿಂತಕರು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಇಡೀ ದೇಶವೇ ಬಸವಣ್ಣನವರ ಜಯಂತಿಯನ್ನು ಶ್ರದ್ಧೆಯಿಂದ ಆಚರಿಸುತ್ತಿದೆ. ತಿಪಟೂರಿನ ಕೋಡಿ ಸರ್ಕಲ್‌ನಲ್ಲಿ ಬಸವಣ್ಣನವರ ಪುತ್ಥಳಿ ಇಟ್ಟು ತೆರವುಗೊಳಿಸಿದ್ದು, ತೀವ್ರನೋವುಂಟಾಗಿದೆ. ಈ ಬಗ್ಗೆ ಶಾಸಕರು ಯೋಚಿಸಬೇಕಿದ್ದು ಕೂಡಲೇ ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಮಾಡಬೇಕು. ಬಸವಣ್ಣ ಯಾವ ವ್ಯಕ್ತಿಯ ಸ್ವತ್ತಲ್ಲ ಒಬ್ಬ ದಾರ್ಶನಿಕರಾಗಿದ್ದು, ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಡಬೇಕು. ಸಮಾಜ ಒಗ್ಗಟ್ಟಾಗಬೇಕು ಎಂದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿ, ಪಂಚಮವರ್ಣರ ಕೇತ ಅಗ್ರಹಾರದಲ್ಲಿ ಸತ್ತು ಬಿದ್ದಿದ್ದ ಶುನಕವನ್ನು ಸ್ವಚ್ಚಗೊಳಿಸಲು ಬಂದಾಗ ಅನಿವಾರ್ಯವಾಗಿ ಮಂತ್ರ ಕೇಳಿಸಿಕೊಂಡನು. ಅದರಿಂದ ಕೆರಳಿದ ಉನ್ನತ ವರ್ಣಿಯರು ಅವನಿಗೆ ಘೋರ ಶಿಕ್ಷೆಯ ವಿಧಿಸಲು ಮುಂದಾದಾಗ ಅಗ್ರೇಸರ ಮಾದರಸನ ಮಗನಾದ ಶ್ರೀ ಬಸವಣ್ಣನವರ ಜನನವಾಯಿತು. ಪ್ರಯುಕ್ತ ಪುತ್ರೋತ್ಸವದ ನೆಪಮಾಡಿ ಅವನಿಗೆ ವಿಧಿಸುವ ಮಾರಣಾಂತಿಕ ಶಿಕ್ಷೆಯ ಕಡಿಮೆ ಮಾಡಲಾಯಿತು. ಇದನ್ನು ಕಥಾವಸ್ತುವಾಗಿ ಹೊಂದಿ ಮುಕ್ತ ಛಂದಸ್ಸಿನ ಚೌಪದಿಯಲ್ಲಿ ಬರೆಯಲಾಗಿದೆ ಎಂದರು.ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ರಚಿಸಿದ ಶ್ರೀ ಬಸವೇಶ್ವರ ಜನನದ ಕಥನ ಕವನ ಕಾರುಣ್ಯ ಶಿಶು ಕೃತಿ ಬಿಡುಗಡೆಗೊಳಿಸಲಾಯಿತು. ಶರಣ ಸಂಸ್ಕೃತಿಯ ಶ್ರೇಷ್ಠತೆಯ ವಿಷಯದ ಬಗ್ಗೆ ವಚನ ಚಿಂತಕಿ ಲೋಕೇಶ್ವರಿ ಪ್ರಭು ಉಪನ್ಯಾಸ ನೀಡಿದರು. ಅಕ್ಕಮಹಾದೇವಿ ಸಮಾಜದಿಂದ ವಚನ ಗಾಯನ ನಡೆಯಿತು. ಮಾದಿಹಳ್ಳಿ ಹಿರೆಮಠಾಧ್ಯಕ್ಷ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಅಧ್ಯಕ್ಷ ಶ್ರೀ ವಾಗೀಶ್ ಪಂಡಿತಾರಾಧ್ಯರು, ಕದಳಿ ಬಳಗದ ಅಧ್ಯಕ್ಷೆ ಸ್ವರ್ಣಗೌರಿ, ಅಕ್ಕ ಮಹಾದೇವಿ ಸಮಾಜದ ಮುಕ್ತಾತಿಪ್ಪೇಶ್, ಸಮಾಜದ ಮುಖಂಡರಾದ ಟಿ.ಎನ್. ಪರಮಶಿವಯ್ಯ, ಸಂಗಮೇಶ್, ವೋಡಫೋನ್ ಚಂದ್ರು, ಸೋಮಶೇಖರ್, ರೇಣುಕಾರಾಧ್ಯ, ಜಿ.ಕೆ. ಸುರೇಶ್, ಮಂಜಪ್ಪ ವಕೀಲ ಶೋಭಾಜಯದೇವ್ ಇದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.