ಶಿವಶರಣರ ನುಡಿಮುತ್ತುಗಳೇ ವಚನ: ಚೇತನ

| Published : Aug 21 2025, 02:00 AM IST

ಸಾರಾಂಶ

ವಚನ ರಚನೆಯ ಮೂಲಕ ಲೋಕದ ಡೊಂಕನ್ನು ತಿದ್ದುವ ಕಾಯಕ ನಿಷ್ಠೆಯಿಂದ ಮಾಡಿ ಅಜರಾಮರ ಆದವರು ಶರಣರು

ಗದಗ: 12ನೇ ಶತಮಾನದ ಕಲ್ಯಾಣದಲ್ಲಿ ನೆಲೆ ನಿಂತ ಬಸವಾದಿ ಶಿವಶರಣರು ಮುಕ್ತವಾಗಿ ಅಭಿವ್ಯಕ್ತಿಗೊಳಿಸಿದ ನುಡಿಮುತ್ತುಗಳೇ ವಚನಗಳು ಎಂದು ರೋಟರಿ ಗದಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಚೇತನ ಅಂಗಡಿ ಹೇಳಿದರು.

ಬೆಟಗೇರಿಯ ರಂಗಾವಧೂತರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 10ರಲ್ಲಿ ಜಿಲ್ಲಾ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತಭೋಜನ ಜ್ಞಾನಸಿಂಚನ ಮಾಲಿಕೆ-15ರಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.

ವಚನ ರಚನೆಯ ಮೂಲಕ ಲೋಕದ ಡೊಂಕನ್ನು ತಿದ್ದುವ ಕಾಯಕ ನಿಷ್ಠೆಯಿಂದ ಮಾಡಿ ಅಜರಾಮರ ಆದವರು ಶರಣರು. ಇವರ ಸದ್ಭಾವನೆಯು ಸದಾ ನಮಗೆ ಆದರ್ಶ.ಎಳೆಯರು ಯಾವಾಗಲೂ ಗೆಳೆಯರಾಗಿರಬೇಕು ಎಂದರು.

ಗಣ್ಯ ವರ್ತಕ ಮಂಜುನಾಥ ಬೇಲೇರಿ ಮಾತನಾಡಿ, ಸದ್ಭಾವನೆಗಳು ಸುಗಂಧ ಬೀರುವ ಹೂವುಗಳಂತೆ. ನಾವು ಶರಣರ ಬದುಕನ್ನು ಮಾದರಿಯಾಗಿ ಇಟ್ಟುಕೊಂಡು ಮುನ್ನಡೆಯಬೇಕು. ಸತ್ಯ, ಪ್ರಾಮಾಣಿಕತೆ ರೂಢಿಸಿಕೊಂಡಲ್ಲಿ ಸದ್ಭಾವನೆಯು ತಾನಾಗಿಯೇ ಒಡಮೂಡುತ್ತದೆ. ಪರಸ್ಪರ ಗೌರವ, ಮಾನವೀಯತೆಯ ಸಂಬಂಧ ಬೆಳೆಸಿಕೊಳ್ಳಲು ಮಕ್ಕಳು ಮುಂದಾಗಬೇಕು ಎಂದರು.

ಡಾ.ಪ್ರಭು ಗಂಜಿಹಾಳ ಮಾತನಾಡಿ, ಪರಸ್ಪರ ನಾವು ಒಬ್ಬರಿಗೊಬ್ಬರು ಸ್ನೇಹ ಸಂಬಂಧದಿಂದ ಕೂಡಿ ಬೆಳೆಯಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನವಿದ್ದಂತೆ. ಹಿರಿಯರ, ಶರಣರ ಜೀವನ ಚರಿತ್ರೆ ನಮ್ಮಲ್ಲಿ ಆದರ್ಶ ಮೌಲ್ಯ ಬಿತ್ತುತ್ತವೆ. ನುಡಿದಂತೆ ನಡೆದ ಶರಣರು ಸದ್ಭಾವನೆಯ ಮೂರ್ತಿಗಳಾಗಿದ್ದಾರೆ ಎಂದರು.

ಕ್ಲಬ್‌ನ ಮಾಜಿ ಅಧ್ಯಕ್ಷ ದಶರಥರಾಜ ಕೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಮೇಶ ತೋಟದ, ಶಾಲಾ ಮುಖ್ಯೋಪಾಧ್ಯಾಯಿನಿ ಆರ್.ಎಲ್.ಹೂವಿನಹಳ್ಳಿ, ಎಸ್.ಎಸ್.ಜಂತ್ಲಿ, ನಾಗವೇಣಿ ಮಾದಗುಂಡಿ, ಬಸಮ್ಮ ಕೋರಿ, ಸುವರ್ಣ ಹೊಸಮನಿ ಉಪಸ್ಥಿತರಿದ್ದರು. ಎಚ್.ಬಿ.ಬಾಕಳೆ ಸ್ವಾಗತಿಸಿದರು. ಎಸ್.ಬಿ. ಮುಧೋಳಮಠ ನಿರೂಪಿಸಿದರು. ಜಿ.ಕೆ. ಹೂಗಾರ ಪರಿಚಯಿಸಿದರು.

ಕವಿತಾ ಬೇಲೇರಿ ವಂದಿಸಿದರು.