ಸಾರಾಂಶ
ಬ್ಯಾಡಗಿ: ೧೨ನೇ ಶತಮಾನದಲ್ಲಿ ಶಿವಶರಣರು ಸಾಮಾಜಿಕ ಸಮಾನತೆ ಹಾಗೂ ಅಂಧಕಾರಗಳನ್ನು ತೊಡೆದುಹಾಕಲು ನಡೆಸಿದ ಹೋರಾಟದಿಂದ ಎಲ್ಲರಿಗೂ ಸಮಾನತೆ ದೊರಕಿದೆ ತಹಸೀಲ್ದಾರ್ ಫೀರೋಜ್ ಸೋಮನಕಟ್ಟಿ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಸವಣ್ಣನವರ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ, ಡೋಹಾರ ಕಕ್ಕಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಹಲವು ಶರಣರು ತಮ್ಮದೆ ಸಾಮಾಜಿಕ ಕೊಡುಗೆ ನೀಡಿದ್ದು, ಅವರ ಸಮಾಜ ಸುಧಾರಣೆ ಹೋರಾಟದಿಂದ ಎಲ್ಲರಿಗೂ ನ್ಯಾಯ ದೊರೆತಿದೆ. ಸಮಾಜದಲ್ಲಿದ್ದ ಕಂದಾಚಾರ ಹಾಗೂ ಮೌಢ್ಯಆಚರಣೆಗಳನ್ನು ತೊಡೆದುಹಾಕುವಲ್ಲಿ ಆಗಿನ ಶಿವಶರಣರು ನಡೆಸಿದ ಯತ್ನ ಪ್ರಸಕ್ತ ಸಮಾಜಕ್ಕೆಉಪಯುಕ್ತವಾಗಿದೆ. ಜಾತಿಭೇದ, ಬಡವ ಬಲ್ಲಿದನೆನ್ನದೆ ಎಲ್ಲರೂ ಸಮಾಜದಲ್ಲಿ ಸಮಾನತೆ ಒದಗಿಸಬೇಕಿದೆ. ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣ ಪಡೆದಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯವಾಗಲಿದೆ. ಸಮಾಜ ಬಾಂಧವರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಲು ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.ಸಾಮಾಜಿಕ ಹೋರಾಟಗಾರ ಜಯದೇವಪ್ಪ ಶೀಲವಂತರ ಮಾತನಾಡಿ, ೧೨ನೇ ಶತಮಾನದಲ್ಲಿ ನೂರಾರು ಶಿವಶರಣರು ಸಾಮಾಜಿಕ ಕೊಡುಗೆ ನೀಡಿದ್ದರೂ ಬಹುತೇಕ ಶರಣರು ಬೆಳಕಿಗೆ ಬಾರದಿರುವುದು ಖೇದನೀಯವಾಗಿದೆ. ಇಂತಹ ಮಹಾಪುರುಷರ ಜೀವನ ಚರಿತ್ರೆಗಳನ್ನು ಶೋಧಿಸಿ ಪ್ರಸಕ್ತದಲ್ಲಿ ಮುದ್ರಿಸಿ, ಸಮಾಜದ ಮೇಲೆ ಬೆಳಕು ಚೆಲ್ಲುವ ವ್ಯವಸ್ಥೆಯಾಗಬೇಕು. ಬಸವಣ್ಣನ ಕಾಲದಲ್ಲಿ ಆಗಿನ ಶರಣರು ನಿರ್ಭಿಡೆಯಿಂದ ತಮ್ಮ ಸಾಹಿತ್ಯ ಹಾಗೂ ವಚನಗಳಲ್ಲಿ ಸಾಮಾಜಿಕ ಅಂಕುಡೊಂಕುಗಳನ್ನು ಎತ್ತಿ ಹೇಳಿರುವುದು ಅವರ ನೈಜಕಾಳಜಿ ಸಾಕ್ಷಿಯಾಗಿದೆ. ಶರಣರ ಜಯಂತ್ಯುತ್ಸವ ಆಚರಣೆಯಿಂದ ಅಭಿವೃದ್ಧಿ ಹಾಗೂ ಸಮಾಜ ಪರಿವರ್ತನೆ ಸಾದ್ಯವಿಲ್ಲ. ಅವರ ನಡೆನುಡಿ ಹಾಗೂ ಜೀವನ ಚರಿತ್ರೆಗಳನ್ನು ನಾವು ಅನುಸರಿಬೇಕಿದೆ. ಎಲ್ಲ ಸಮಾಜಗಳ ಅಭಿವೃದ್ಧಿಗೂ ಶಿಕ್ಷಣ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಬೇಕಿದೆ.ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ.ಎಂ.ಎನ್. ತಿಮ್ಮಾರೆಡ್ಡಿ, ಸಮಾಜ ಮುಖಂಡರಾದ ದುಂಡೆಪ್ಪ ಕಾಯಕದ, ಗಂಗಣ್ಣ ಎಲಿ, ಬಿ.ಎನ್. ಕಾಯಕದ, ಶಿವಾನಂದ ಕಟ್ಟಿಮನಿ, ಹಾಲಪ್ಪ ಕಾಯಕದ, ಮಾಲತೇಶ ಧನ್ನೂರು, ವಿಜಯಕುಮಾರ ಕಾಯಕದ, ನಾಗರಾಜ ಕಾಯಕದ, ವಕೀಲ ಮೃತ್ಯುಂಜಯ ಕಾಯಕದ, ಎನ್. ಬಿ. ಗುಳೇದ ಇದ್ದರು.