ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಜನ ಸದಾ ಜಾಗೃತವಾಗಿರಬೇಕು ಎಂದು ಪ್ರಗತಿಪರ ಚಿಂತಕ ಶಿವಸುಂದರ್ ತಿಳಿಸಿದರು.ನಗರದ ಅಶೋಕ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಅಶೋಕಪುರಂ ಅಭಿಮಾನಿಗಳ ಬಳಗ, ಕರ್ನಾಟಕ ದಲಿತ ವೆಲ್ ಫೇರ್ ಟ್ರಸ್ಟ್ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ 2024ರ ಚುನಾವಣೋತ್ತರ ಭಾರತ ಕುರಿತು ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು, 2024ರಲ್ಲಿ ಇಂಡಿಯಾ ಒಕ್ಕೂಟ ಅಥವಾ ಎನ್ ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರ ಮೇಲಿನ ಜವಾಬ್ದಾರಿ ಕಿಂಚಿತ್ತೂ ಕಡಿಮೆ ಆಗುವುದಿಲ್ಲ ಎಂದರು.
ಒಂದು ವೇಳೆ 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಭ್ರಮನಿರಸನಗೊಳ್ಳುವ ಬಿಜೆಪಿ ಮತ್ತು ಸಂಘ ಪರಿವಾರವು ಇಂಡಿಯಾ ಒಕ್ಕೂಟಕ್ಕೆ ಆಡಳಿತ ನಡೆಸಲು ಅವಕಾಶ ಕೊಡುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಸಕಲೆಂಟು ತಂತ್ರ- ಕುತಂತ್ರಗಳನ್ನು ನಡೆಸುತ್ತದೆ ಎಂದು ಅವರು ದೂರಿದರು.ಈಗಾಗಲೇ ಸಂವಿಧಾನದ ನಾಶಕ್ಕೆ ಕೈ ಹಾಕಿದ್ದ ಬಿಜೆಪಿ ಒಂದು ವೇಳೆ ಈ ಚುನಾವಣೆಯಲ್ಲಿ ಸರಳ ಬಹುಮತದ ಮೂಲಕ ಅಧಿಕಾರಕ್ಕೆ ಬಂದರೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ತೆಗೆದು ಹಾಕಿ ಮತ್ತೆ ಮನುಸ್ಮೃತಿ ಆಧಾರಿತ ಅಸಮಾನತೆ ಮತ್ತು ಅನ್ಯಾಯದ ಆಡಳಿತವನ್ನು ಜಾರಿಗೆ ತರುತ್ತಾರೆ ಎಂದು ಅವರು ಆರೋಪಿಸಿದರು.
ಮೋದಿ ಅವರು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರವನ್ನು ಕಡಿಮೆ ಮಾಡಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮ ದಾಳಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಅಧಿಕಾರಕ್ಕೆ ಬಂದರು. ಈ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು ಎಂದು ಅವರು ಟೀಕಿಸಿದರು.ಬಿಜೆಪಿ ಗೆದ್ದರೂ ಸೋತರೂ ಮೋದಿ ಹವಾ ಈಗ ಕಡಿಮೆಯಾಗಿದೆ. ಆದ್ದರಿಂದಲೇ ಅವರು ಚುನಾವಣಾ ಭಾಷಣಗಳಲ್ಲಿ ಪ್ರಚೋಧನಾಕಾರಿಯಾಗಿ ಮಾತನಾಡುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಈ ಚುನಾವಣೆಯಲ್ಲಿ ಗೆಲ್ಲುವ ಪ್ರಚಾರ, ಶಕ್ತಿ, ಪ್ರಭಾವ ಇತ್ತೇ ಎಂಬುದು ಚುನಾವಣೆಯ ನಂತರ ತಿಳಿಯುತ್ತದೆ ಎಂದರು.
ಧರ್ಮಸ್ಥಳಕ್ಕೆ ಮೀನು ತಿಂದು ಹೋದರೆ ತಪ್ಪೇನು ಎಂದು ಧೈರ್ಯವಾಗಿ ಹೇಳಿದ್ದ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅದೇ ಧರ್ಮ ಸ್ಥಳಕ್ಕೆ ಅತ್ಯಂತ ಸುಚಿಯಾಗಿ ಮಡಿಯುಟ್ಟು ಹೋದರು. ಆದರೆ, ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಪ್ರಜ್ವಲ್ ರೇವಣ್ಣನ ಪ್ರಕರಣವೂ ಹೀಗೆಯೇ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್. ಲಿಂಗಪ್ಪ ಮಾತನಾಡಿ, ಜವಹಾರ್ ಲಾಲ್ ನೆಹರು ಸಾಕಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಆದರೆ, 10 ವರ್ಷಗಳ ಆಡಳಿತದ ಅವಧಿಯಲ್ಲಿ ಒಂದು ಸಾರ್ವಜನಿಕ ಸಂಸ್ಥೆಯನ್ನೂ ಸ್ಥಾಪಿಸದ ಮೋದಿ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳಶಾಹಿಗಳಿಗೆ ಮಾರಟ ಮಾಡಿದರು. ಕೇಂದ್ರ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಕಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲಿಲ್ಲ. ಹಸಿ ಸುಳ್ಳುಗಳನ್ನು ಹೇಳುವುದನ್ನು ಬಿಟ್ಟು ಮೋದಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.
ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಮೆಸ್ಕೋ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಶಬೀರ್ ಮುಸ್ತಫಾ, ಸಾಹಿತಿ ಸಿದ್ಧಸ್ವಾಮಿ, ದಲಿತ ವೆಲ್ ಫೇರ್ ಟ್ರಸ್ಟ್ ಗೌರವಾಧ್ಯಕ್ಷ ಪ್ರೊ.ಟಿ.ಎಂ. ಮಹೇಶ್, ಗಾಯಕ ಅಮ್ಮ ರಾಮಚಂದ್ರ ಮೊದಲಾದವರು ಇದ್ದರು.