ಆಸ್ತಿ ನೋಂದಣಿಗೆ ವಿದ್ಯುತ್‌ ಸಂಪರ್ಕ ಕಡಿತದ ಶಾಕ್‌!

| Published : Jan 18 2025, 12:48 AM IST

ಸಾರಾಂಶ

ಕೆಲವು ತಿಂಗಳುಗಳ ವಿದ್ಯುತ್‌ ಬಿಲ್‌ ಬಾಕಿ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಶುಕ್ರವಾರ ಕಚೇರಿಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ಬೆಳಗ್ಗೆ 10.30ರಿಂದ ಆಸ್ತಿ ನೋಂದಣಿಗಾಗಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಬಂದ ಜನರು ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ಮಧ್ಯಾಹ್ನ ವರೆಗೂ ಕಾದು ಬೇಸತ್ತು ಸರ್ಕಾರದ ವಿರುದ್ಧ ಹರಿಹಾಯ್ದರು.

ಧಾರವಾಡ:

ವಿದ್ಯುತ್‌ ಬಿಲ್‌ ತುಂಬಲು (₹ 1.30 ಲಕ್ಷ) ಸರ್ಕಾರ ಅನುದಾನ ನೀಡಿದ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಯ ವಿದ್ಯುತ್‌ ಸಂಪರ್ಕವನ್ನು ಶುಕ್ರವಾರ ಹೆಸ್ಕಾಂ ಕಡಿತ ಮಾಡಿದ್ದು, ನೋಂದಣಿ ಮಾಡಿಸಲು ಬಂದ ಸಾರ್ವಜನಿಕರು ತೀವ್ರ ಪರದಾಡಬೇಕಾಯಿತು.

ಕೆಲವು ತಿಂಗಳುಗಳ ವಿದ್ಯುತ್‌ ಬಿಲ್‌ ಬಾಕಿ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಶುಕ್ರವಾರ ಕಚೇರಿಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ಬೆಳಗ್ಗೆ 10.30ರಿಂದ ಆಸ್ತಿ ನೋಂದಣಿಗಾಗಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಬಂದ ಜನರು ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ಮಧ್ಯಾಹ್ನ ವರೆಗೂ ಕಾದು ಬೇಸತ್ತು ಸರ್ಕಾರದ ವಿರುದ್ಧ ಹರಿಹಾಯ್ದರು. ಕೆಲವರಂತೂ ನೋಂದಣಿ ಇಲಾಖೆ ಮೂಲಕ ಸರ್ಕಾರ ನೋಂದಣಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಪಡೆಯುತ್ತಿದ್ದು ಆ ಹಣವನ್ನು ಏನು ಮಾಡುತ್ತಿದೆ? ಗ್ಯಾರಂಟಿಗೆ ಕೊಡುತ್ತಿದೆಯಾ? ಎಂದು ಹರಿಹಾಯ್ದರು. ಕಚೇರಿ ನಿರ್ವಹಣೆಗೆ ಹಣ ನೀಡಿಲ್ಲ ಎಂಬ ಸಬೂಬೂ ಬೇಡ. ನಾವು ನೋಂದಣಿಗೆ ಹಣ ತುಂಬಿದ್ದೇವೆ. ಕೂಡಲೇ ನೋಂದಣಿ ಮಾಡಿಕೊಡಿ ಎಂದು ದುಂಬಾಲು ಬಿದ್ದರು. ಕಚೇರಿ ಅಧಿಕಾರಿಗಳು ಇಂತಹ ಸಂಗತಿಗಳಿಗೆ ಅನುವು ಮಾಡಿಕೊಡಬಾರದು ಎಂದು ಉಪ ನೋಂದಣಾಧಿಕಾರಿಗಳ ಮೇಲೂ ಹರಿಹಾಯ್ದರು.

ಈ ಕುರಿತು ಸ್ಪಷ್ಟನೆ ನೀಡಿದ ಉಪನೋಂದಣಾಧಿಕಾರಿ ಎಲ್‌.ಆರ್‌. ಲಕ್ಕುಂಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರದಿಂದ ಕಚೇರಿ ನಿರ್ವಹಣೆಗೆ ಅನುದಾನ ಬರುತ್ತದೆ. ಈ ಬಾರಿ ತುಸು ತಡವಾಗಿದೆ. ₹ 1.30 ಲಕ್ಷ ವಿದ್ಯುತ್‌ ಬಿಲ್‌ ತಡವಾಗಿದ್ದಕ್ಕೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದರು. ಇತ್ತ ಬಾಕಿ ಇರುವ ವಿದ್ಯುತ್‌ ಬಿಲ್‌ ವಿಷಯವಾಗಿ ಸರ್ಕಾರವೇ ಹೆಸ್ಕಾಂ ಮೇಲೆ ಒತ್ತಡ ಹಾಕುತ್ತದೆ. ಅತ್ತ, ವಿದ್ಯುತ್‌ ಬಿಲ್‌ ಸೇರಿದಂತೆ ಕಚೇರಿಗಳಿಗೆ ನಿರ್ವಹಣೆಗೆ ಅನುದಾನ ನೀಡದ ಸರ್ಕಾರದ ಇಬ್ಬಗೆ ನೀತಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಈ ವಿಷಯವಾಗಿ ಸಚಿವ ಸಂತೋಷ ಲಾಡ್‌ ಸಹ ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ಕಚೇರಿಗಳಿಗೆ ಸರ್ಕಾರವೇ ಅನುದಾನ ಕೊಡಬೇಕು. ಆದರೆ, ಕೆಲವೊಮ್ಮೆ ವಿಳಂಬ ಆಗಲಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.