ಸಾರಾಂಶ
ಬಳ್ಳಾರಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ವಕೀಲನ ಕೃತ್ಯ ಖಂಡಿಸಿ ಬಳ್ಳಾರಿ ಜಿಲ್ಲಾ ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ನ್ಯಾಯಮೂರ್ತಿಗಳಿಗೆ ಶೂ ಎಸೆದ ವಕೀಲನ ನಡೆ ಅತ್ಯಂತ ಖಂಡನಾರ್ಹವಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈವರೆಗೆ ನಡೆಯದ ದುಷ್ಕೃತ್ಯ ವಕೀಲನೊಬ್ಬನಿಂದ ನಡೆದು ಹೋಗಿದೆ. ಈ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು ಶೂ ಎಸದಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲಿಡ್ಕರ್ ನಿಗಮದ ಅಧ್ಯಕ್ಷ ಹಾಗೂ ಹಿರಿಯ ದಲಿತ ಮುಖಂಡ ಮುಂಡ್ರಗಿ ನಾಗರಾಜ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ಈ ದಾಳಿ ಅತ್ಯಂತ ಖಂಡನೀಯವಾದದ್ದು. ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅಪಮಾನ ಮಾಡಿರುವ ವ್ಯಕ್ತಿಗೆ ಕಾನೂನು ಕ್ರಮ ಜರುಗಿಸಬೇಕು. ಘಟನೆಗೆ ಕುಮ್ಮಕ್ಕು ನೀಡಿರುವ ದ್ರೋಹಿಗಳನ್ನು ಸಹ ಬಂಧಿಸಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಶೂ ಎಸೆದ ಆರೋಪಿಯನ್ನು ದೇಶದ್ರೋಹ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಜಾತಿ ಮೂಲದ ಅಸಮಾನತೆ, ಅಸಹನೆಗಳು ಸಂವಿಧಾನ ಜಾರಿಗೊಂಡು ಐದು ದಶಕಗಳು ಕಳೆದರೂ ಮನುವಾದಿಗಳ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರಿವೆ ಎಂಬುದಕ್ಕೆ ಶೂ ಎಸೆತ ಘಟನೆಯೇ ಸಾಕ್ಷಿಯಾಗಿದೆ. ಇದರಿಂದ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅಪಮಾನವಾಗಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಮುಂಡ್ರಗಿ ನಾಗರಾಜ್ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಹುಮಾಯೂನ್ ಖಾನ್, ರಾಮ್ ಪ್ರಸಾದ್, ಎಲ್.ಮಾರೆಣ್ಣ, ಎರಕುಲಸ್ವಾಮಿ, ಸಂಗನಕಲ್ಲು ವಿಜಯ್ ಕುಮಾರ್, ಅಲಿವೇಲು ಸುರೇಶ್, ಪೂಜಾರಿ ಗಾದೆಪ್ಪ, ಜಿ ಗೋವರ್ಧನ, ಅಬ್ದುಲ್ ಅಯಾಜ್, ಕಣೆಕಲ್ ಮಾಬುಸಾಬ್, ಮಹ್ಮದ್ ರಫೀಕ್, ವಿ.ಕೆ.ಬಸಪ್ಪ, ನಾಗಭೂಷಣಗೌಡ, ವೀರನಗೌಡ, ಬಿ.ಎಂ.ಪಾಟೀಲ್, ಕೊಡ್ಲೆ ಮಲ್ಲಿಕಾರ್ಜುನ, ಶಿವಲಿಂಗಪ್ಪ, ಹುಸೇನಪ್ಪ, ಕಟ್ಟೆಸ್ವಾಮಿ, ಜಗನ್ನಾಥ್, ಮಂಜುಳಾ, ಯಾಸಿನ್, ಶಾಂತಮ್ಮ, ಮಲ್ಲೇಶ್ವರಿ, ಚಂದ್ರಕಲಾ, ಫೋಟೋ ರಾಜಾ, ಅರುಣ್ ಕುಮಾರ್ ಮುಂಡ್ರಿಗಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.