ಸಿಜೆಐ ಮೇಲೆ ಶೂ ಎಸೆತ: 18ಕ್ಕೆ ಚಾಮರಾಜನಗರ ಸ್ವಯಂ ಬಂದ್

| Published : Oct 15 2025, 02:06 AM IST

ಸಾರಾಂಶ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ನಗರದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಅ. ೧೮ರಂದು ಚಾಮರಾಜನಗರ ಸ್ವಯಂ ಬಂದ್ ಮಾಡಲಾಗುತ್ತಿದೆ ಎಂದು ಸಮಿತಿಯ ಮುಖಂಡರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ನಗರದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಅ. ೧೮ರಂದು ಚಾಮರಾಜನಗರ ಸ್ವಯಂ ಬಂದ್ ಮಾಡಲಾಗುತ್ತಿದೆ ಎಂದು ಸಮಿತಿಯ ಮುಖಂಡರು ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವರ್ತನೆ ಖಂಡನೀಯ ಇದೊಂದು ಸಂವಿಧಾನದ ಮೇಲೆ ಮಾಡಿದ ಅಪಚಾರ ಎಂದರು. ಇದು ಭಾರತ ಸಂವಿಧಾನ ವ್ಯವಸ್ಥೆ ತಲೆತಗ್ಗಿಸುವ ವಿಚಾರವಾಗಿದೆ. ಇದು ನ್ಯಾಯಾಂಗದ ಮೇಲೆ ಅವಿಶ್ವಾಸ ಮೂಡಿಸುವ ಘಟನೆ ಇದಾಗಿದೆ. ಇಂತಹ ಘಟನೆಯಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ರಾಕೇಶ್ ಕಿಶೋರ್ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಒತ್ತಾಯಿಸಿದರು.

ದೇಶವು ಸರ್ವಧರ್ಮ ಜಾತಿ ಭಾಷೆ ಸಂಸ್ಕೃತಿಯನ್ನು ಒಳಗೊಂಡ ಸಂವಿಧಾನವಾಗಿದೆ. ಈಗಿರುವಾಗ ಇಂತಹ ಸಂದರ್ಭದಲ್ಲಿ ರಾಷ್ಚ್ರದ ಅತ್ಯುನ್ನತ ಪದವಿಯಾದ ಮತ್ತು ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗ ಪೀಠದ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದಿರುವ ಘಟನೆಯು ಅತ್ಯಂತ ಖಂಡನೀಯ ಎಂದರು.

ಪ್ರಜಾಪ್ರಭುತ್ವ ಉಳಿವಿಗಾಗಿ ಚಾಮರಾಜನಗರ ಸ್ವಯಂ ಬಂದ್ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಸಂಘ ಸಂಸ್ಥೆಗಳು, ಎಲ್ಲಾ ರಾಜಕೀಯ ಪಕ್ಷಗಳು, ವಿವಿಧ ಸಮಾಜದ ಸಂಘ ಸಂಸ್ಥೆಗಳು, ಚಾಮರಾಜನಗರ ವರ್ತಕರ ಸಂಘ, ಹೋಟೆಲ್ ಮತ್ತು ಸಿನಿಮಾ ಮಂದಿರದ ಮಾಲೀಕರು, ಖಾಸಗಿ ಬಸ್ಸು, ಆಟೋ, ಲಾರಿ, ಗೂಡ್ಸ್ ಆಟೋ, ಟೆಂಪೋ, ಕಾರುಗಳು, ಎತ್ತಿನ ಗಾಡಿಗಳು, ಹಣ್ಣು ತರಕಾರಿ, ಹೂವು ಮಾರಾಟಗಾರರು, ಎಲ್ಲಾ ತರಹದ ವ್ಯಾಪಾರಸ್ಥರುಗಳು, ರಸ್ತೆ ಸಾರಿಗೆ , ಮಾಲೀಕರು ಮತ್ತು ಚಾಲಕರುಗಳು, ಎಲ್ಲಾ ಕನ್ನಡ ಪರ ಸಂಘಟನೆಗಳ ಹೋರಾಟಗಾರರು, ರೈತ ಪರ ಹೋರಾಟಗಾರರು, ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟಗಾರರು, ಸಾರ್ವಜನಿಕರು ಮತ್ತು ನಾಗರೀಕರು ಈ ಸ್ವಯಂ ಬಂದ್ ಹಾಗೂ ಪ್ರತಿಭಟನಾ ರ್‍ಯಾಲಿಯನ್ನು ಬೆಂಬಲಿಸುವುದರ ಜೊತೆಗೆ ಭಾಗವಹಿಸಿ, ಯಶಸ್ವಿಗೊಳಿಸಿಕೊಡಬೇಕಾಗಿ ಮನವಿ ಮಾಡಿದರು.

ಚಾಮರಾಜನಗರದ ಪಚ್ಚಪ್ಪ ವೃತ್ತದಿಂದ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣೆಗೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಅಯ್ಯನಪುರ ಶಿವಕುಮಾರ್, ಎಂ. ರಾಮಚಂದ್ರ, ಮೂಡ್ಲುಪುರ ನಂದೀಶ್, ಆರ್. ಮಹದೇವ್, ಚಿಕ್ಕಮಹದೇವ್, ಉಮೇಶ್ ಆರ್, ಅಬ್ರಹಾರ್ ಅಹಮದ್, ಚಾ.ರಂ. ಶ್ರೀನಿವಾಸಗೌಡ, ನಾಗಯ್ಯ ಇದ್ದರು.