ಕಡೂರುಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಶೂ ಹಾಗೂ ಸಾಕ್ಸ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಕ್ಕಳಿಗೆ ನೀಡುವ ಯೋಜನೆಯಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆರೋಪಿಸಿದರು.

- ಪೂರೈಕೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಕಡೂರುಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಶೂ ಹಾಗೂ ಸಾಕ್ಸ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಕ್ಕಳಿಗೆ ನೀಡುವ ಯೋಜನೆಯಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆರೋಪಿಸಿದರು.ಪಟ್ಟಣದ ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಜಿಎಸ್ ಹೆರಿಟೇಜ್ ಸ್ಕೂಲ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 17ರ ವಯೋಮಿತಿ ಪ್ರೌಢಶಾಲೆಗಳ ಗುಂಪು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಪೂರೈ ಸುತ್ತಿರುವ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್‌ಗಳ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕಳಪೆ ವಸ್ತುಗಳ ಪೂರೈಕೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕ್ರೀಡಾಕೂಟಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ರಾಜ್ಯದ ಸಾವಿರಕ್ಕೂ ಹೆಚ್ಚು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗೆ ಅಗತ್ಯ ತರಬೇತಿ ಪಡೆಯುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಪಠ್ಯ ಶಿಕ್ಷಣದಷ್ಟೇ ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಬೇಕು ಎಂದರು.ಮಕ್ಕಳನ್ನುಕೇವಲ ಅಂಕ ಹಾಗೂ ಪದವಿ ಗಳಿಕೆಗೆ ಸೀಮಿತಗೊಳಿಸದೆ, ಉತ್ತಮ ಸಂಸ್ಕಾರ ಮತ್ತು ಮೌಲ್ಯ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಮಕ್ಕಳ ಆಸಕ್ತಿ ಗುರುತಿಸಿ ಶಿಕ್ಷಕರು ಪ್ರೋತ್ಸಾಹಿಸಿದಾಗ ಅವರು ಉನ್ನತ ಸಾಧನೆ ಮಾಡಲು ಸಾಧ್ಯ. ಸೀಮಿತ ಸೌಲಭ್ಯದ ನಡುವೆಯೂ ಗ್ರಾಮೀಣ ಭಾಗದ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸುತ್ತಿರುವುದು ಶ್ಲಾಘನೀಯ ಎಂದರು.ಕ್ರೀಡಾಜ್ಯೋತಿ ಸ್ವೀಕರಿಸಿದ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೆಹಳ್ಳಿ ನೀಲಕಂಠಪ್ಪ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿರಬೇಕು. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.ಜಿಲ್ಲೆಯ ಎಂಟು ತಾಲೂಕುಗಳಿಂದ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಬಿಇಒ ಎಂ.ಎಚ್.ತಿಮ್ಮಯ್ಯ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರಪ್ಪ, ಎ.ವಿ.ಚಂದ್ರಪ್ಪ, ಭೈರೇಗೌಡ, ಬಿಜಿಎಸ್ ಶಾಲೆ ಪ್ರಾಂಶುಪಾಲ ಬಿ.ಆರ್.ರಮೇಶ್, ಧನಪಾಲನಾಯ್ಕ, ಕುಮಾರಸ್ವಾಮಿ, ಎಂ.ವಿ.ಶಂಕರೇಗೌಡ, ಫೈರೋಜ್ ಅಹಮದ್, ತಿಮ್ಮಪ್ಪ, ಲತಾಮಣಿ, ರಾಜೇಶ್ವರಿ, ಕೆ.ಜಗದೀಶ್, ಹರೀಶ್, ಮುರಳೀಧರ್, ಆಂಜನೇಯ, ಹನುಮಂತಪ್ಪ ಮತ್ತಿತರರು ಇದ್ದರು.