ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರ ಬೇಜವಾಬ್ದಾರಿತನದಿಂದ ಯಾವ ಮಕ್ಕಳು ಸಹ ಪ್ರವಾಸಕ್ಕೆ ಹೋಗದಂತಾಯಿತು.

ಎಂ. ಪ್ರಹ್ಲಾದ್ ಕನಕಗಿರಿ

ಪಟ್ಟಣದ ಕೆಪಿಎಸ್ (ಪ್ರೌಢ ಶಾಲಾ ವಿಭಾಗ)ದ 700ಕ್ಕೂ ಹೆಚ್ಚು ಮಕ್ಕಳಿಗೆ ಕಳೆದ ಸಾಲಿನ (2025-26) ಶೂ ಸಾಕ್ಸ್ ವಿತರಿಸದೆ ಇಲಾಖೆಯ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ.

ಬಡ ಹಾಗೂ ಹಿಂದುಳಿದ ಮಕ್ಕಳ ಕಲಿಕೆಗೆ ಸರ್ಕಾರ ಕೋಟಿಗಟ್ಟಲೇ ಅನುದಾನ ನೀಡುತ್ತಿದ್ದು, ಸಮರ್ಪಕವಾಗಿ ಬಳಕೆಯಾಗುತ್ತಿಲ್ಲವಾಗಿದ್ದು, ಕಳೆದ ವರ್ಷ ಮಕ್ಕಳಿಗೆ ವಿತರಿಸಬೇಕಿದ್ದ ಶೂ ಮತ್ತು ಸಾಕ್ಸ ಅನ್ನು 2026-27ನೇ ಸಾಲಿನಲ್ಲಿ ವಿತರಿಸುತ್ತೇವೆ ಎನ್ನುವ ವಾಟ್ಸಾಪ್ ಸಂದೇಶ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳ ಗ್ರುಪಿಗೆ ರವಾನಿಸಿರುವುದು ಬಾರಿ ಚರ್ಚೆಗೆ ಗ್ರಾಸವಾಗಿದೆ.

2025-26ನೇ ಸಾಲಿನಲ್ಲಿ ಮಕ್ಕಳ ಶೂ, ಸಾಕ್ಸ್‌ ಖರೀದಿಗೆ ಶೇ.70ರಷ್ಟು ಬಿಡುಗಡೆಯಾಗಿದ್ದರೂ ಅನುದಾನ ಬಳಸಿಕೊಳ್ಳದಿರುವುದು ಇಲಾಖೆಯ ನಿಯಮ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ. ಶಾಲೆಯ 8, 9 ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ 700 ಮಕ್ಕಳು ಶೂ ಮತ್ತು ಸಾಕ್ಸ್‌ ನಿಂದ ವಂಚಿತಗೊಂಡಿರುವ ಕುರಿತು ಪಾಲಕರು ದೂರಿದ್ದು, ಲಕ್ಷಾಂತರ ಅನುದಾನ ದುರ್ಬಳಕೆಯಾಗುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಇನ್ನು ಎಸ್ಸಿ ಮತ್ತು ಎಸ್ಟಿ ವರ್ಗದ ಮಕ್ಕಳಿಗೆ ಕರ್ನಾಟಕ ದರ್ಶನ ಯೋಜನೆಯಡಿ ಪ್ರವಾಸಕ್ಕೆ ಕಳುಹಿಸಬೇಕಾಗಿತ್ತು. ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರ ಬೇಜವಾಬ್ದಾರಿತನದಿಂದ ಯಾವ ಮಕ್ಕಳು ಸಹ ಪ್ರವಾಸಕ್ಕೆ ಹೋಗದಂತಾಯಿತು. ಈ ಕುರಿತು ಕೆಲ ಸಂಘಟನೆಗಳು ಇಲಾಖೆಗೆ ದೂರು ನೀಡಿದಾಗ ಪಾಲಕರಿಂದ ಪ್ರವಾಸ ನಿರಾಕರಿಸುವ ಪತ್ರ ಪಡೆದು ಪ್ರಕರಣ ಸಂಪೂರ್ಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಮಕ್ಕಳು ಹಾಗೂ ಪಾಲಕರ ಬಳಿ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಹೇಳುವಂತೆ ಬೆದರಿಕೆ ಹಾಕಿದ್ದಾರೆ, ಶೂ,ಸಾಕ್ಸ್‌ನ್ನು ಮಕ್ಕಳಿಗೆ ವಿತರಿಸದೆ ನಿಯಮ ಗಾಳಿಗೆ ತೂರಲಾಗಿದೆ ಎಂದು ಶಿಕ್ಷಣ ಪ್ರೇಮಿ ನೀಲಕಂಠ ಬಡಿಗೇರ ಆರೋಪಿಸಿದ್ದಾರೆ.

ಕಳೆದ ಸಾಲಿನ ಶೂ, ಸಾಕ್ಸ್‌ ಖರೀದಿಗೆ ಅರ್ಧ ಅನುದಾನ ಬಂದಿದೆ. ಮಾರ್ಚ್ ನಲ್ಲಿ ಇನ್ನುಳಿದ ಅನುದಾನವೂ ಬಂದಿದೆ. ಮೇಲಾಧಿಕಾರಿಗಳ ಆದೇಶದಂತೆ ಕಳೆದ ವರ್ಷದ ಶೂ, ಸಾಕ್ಸ್‌ ವಿತರಿಸಲು ಮುಂದಾಗಿದ್ದೇನೆ. ಕಳೆದ ಸಾಲಿನಲ್ಲೇ ವಿತರಿಸಬೇಕಿತ್ತು. ಅನಾರೋಗ್ಯ ಸಮಸ್ಯೆಯಿಂದ ತಡವಾಗಿ ವಿತರಿಸುತ್ತಿದ್ದೇನೆ ಎಂದು ಮುಖ್ಯೋಪಾಧ್ಯಾಯ ಜಗದೀಶ ಹಾದಿಮನಿ ತಿಳಿಸಿದ್ದಾರೆ.

ಕನಕಗಿರಿ ಕೆಪಿಎಸ್ ನ ಪ್ರೌಢ ಶಾಲೆಯ ಶೂ, ಸಾಕ್ಸ್‌ ವಿತರಣೆಯಲ್ಲಿ ವಿಳಂಬವಾಗಿದೆ. ಕರ್ನಾಟಕ ದರ್ಶನ ಯೋಜನೆಯಡಿ ಎಸ್ಸಿ,ಎಸ್ಟಿ ಮಕ್ಕಳು ಪ್ರವಾಸದಿಂದ ವಂಚಿತರಾಗಿರುವ ಕುರಿತು ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಡಿಡಿಪಿಐ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ತಿಳಿಸಿದ್ದಾರೆ.