ಮಳಿಗೆ ಇ-ಟೆಂಡರ್ ಪ್ರಕ್ರಿಯೆಯೇ ಅನುಮಾನ!

| Published : Feb 26 2024, 01:32 AM IST

ಸಾರಾಂಶ

ರಾಜ್ಯ ರಸ್ತೆ ಸಾರಿಗೆ ನಿಗಮದ ಅತ್ಯಾಧುನಿಕ ಬಸ್‌ ನಿಲ್ದಾಣ ಹೈಟೆಕ್‌ ಸ್ಪರ್ಶದೊಂದಿಗಿನ ನಿಲ್ದಾಣದಲ್ಲಿ ಮಳಿಗೆಗಳ ಬಾಡಿಗೆ ನೀಡುವ ಬಗ್ಗೆ ಇ-ಟೆಂಡರ್ ಕರೆಯಲಾಗಿತ್ತು. ನಿಯಮಾನುಸಾರ ಬಿಡ್ ದಾರರು ತಾಂತ್ರಿಕ ಲಕೋಟೆ ಜೊತೆಗೆ ಆರ್ಥಿಕ ಲಕೋಟೆಯಲ್ಲೂ ತಮ್ಮ ಬಿಡ್ ಕೂಗಿದ್ದರು. ಅತೀ ಹೆಚ್ಚು ಬಿಡ್ ಮಾಡಿದವರಿಗೆ ಮಳಿಗೆ ನೀಡಬೇಕು. ಆದರೆ, ಪಾರದರ್ಶಕವಾಗಿ, ನಿಗದಿತ ದಿನದಂದು ಮಾಡದೇ, ತಡವಾಗಿ ತೆರೆದಿದ್ದು ಏಕೆ ಎಂಬುದು ಕೆಲವರ ಪ್ರಶ್ನೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 106 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ದಾವಣಗೆರೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಈಗ 18 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಿಗದಿತ ದಿನದಂದು ನಡೆಸದೇ, ಆರು ದಿನ ತಡವಾಗಿ ಟೆಕ್ನಿಕಲ್ ಬಿಡ್‌ ಪ್ರಕ್ರಿಯೆ ಕೈಗೊಂಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣ‍ವಾಗಿದೆಯೆಂಬ ಮಾತು ಕೇಳಿ ಬರುತ್ತಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಅತ್ಯಾಧುನಿಕ ಬಸ್‌ ನಿಲ್ದಾಣ ಹೈಟೆಕ್‌ ಸ್ಪರ್ಶದೊಂದಿಗಿನ ನಿಲ್ದಾಣದಲ್ಲಿ ಮಳಿಗೆಗಳ ಬಾಡಿಗೆ ನೀಡುವ ಬಗ್ಗೆ ಇ-ಟೆಂಡರ್ ಕರೆಯಲಾಗಿತ್ತು. ನಿಯಮಾನುಸಾರ ಬಿಡ್ ದಾರರು ತಾಂತ್ರಿಕ ಲಕೋಟೆ ಜೊತೆಗೆ ಆರ್ಥಿಕ ಲಕೋಟೆಯಲ್ಲೂ ತಮ್ಮ ಬಿಡ್ ಕೂಗಿದ್ದರು. ಅತೀ ಹೆಚ್ಚು ಬಿಡ್ ಮಾಡಿದವರಿಗೆ ಮಳಿಗೆ ನೀಡಬೇಕು. ಆದರೆ, ಪಾರದರ್ಶಕವಾಗಿ, ನಿಗದಿತ ದಿನದಂದು ಮಾಡದೇ, ತಡವಾಗಿ ತೆರೆದಿದ್ದು ಏಕೆ ಎಂಬುದು ಕೆಲವರ ಪ್ರಶ್ನೆ. ಮಹಿಳಾ ಆರ್ಥಿಕ ಸ್ವಾವಲಂಬನೆ ನೀಡಲು, ಮಹಿಳೆಯರಿಗೂ ಮಳಿಗೆ ನೀಡಬೇಕಿತ್ತು. ಆದರೆ, ಏಕೆ ಮಳಿಗೆ ಇಟ್ಟಿಲ್ಲ ಎಂಬ ಪ್ರಶ್ನೆ ಬಿಡ್‌ದಾರರದ್ದಾಗಿದೆ.

ಇ-ಟೆಂಡರ್ ಪ್ರಕಟಣೆ ಪ್ರಕಾರ ಫೆ.13ಕ್ಕೆ ಟೆಂಡರ್ ತೆರೆಯಬೇಕಿತ್ತು. ಆದರೆ, ಫೆ.14ಕ್ಕೆ ತಾಂತ್ರಿಕ ಬಿಡ್ ತೆಗೆಯುವುದಾಗಿ ಹೇಳಿ, ಫೆ.20ಕ್ಕೆ ಓಪನ್ ಮಾಡಿದ್ದು ಯಾಕೆ? ಅಲ್ಲದೇ, ಬಿಡ್‌ದಾರರಿಗೆ ಯಾವುದೇ ಪೂರ್ವಾಪರ ಮಾಹಿತಿ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಕೆಎಸ್ಸಾರ್ಟಿಸಿ ವರ್ತನೆ ಇದೆ. ಹೆಚ್ಚು ಬಿಡ್ ಕೂಗಿದರೂ ಮಳಿಗೆ ಬಾಡಿಗೆ ಕಡಿಮೆ ಮಾಡಿಸುವುದಾಗಿ ಕೆಲವರು ಹೇಳುತ್ತಿರುವುದು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ.

ನಿಗದಿತ ದಿನದಂದು ಟೆಕ್ನಿಕಲ್ ಬಿಡ್ ತೆರೆಯದಿರುವುದು, ಬಿಡ್‌ದಾರರಿಗೆ ಈ ಪ್ರಕ್ರಿಯೆ ಮಾಹಿತಿ ನೀಡದಿರುವುದು ಯಾಕೆಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಯಾರಿಂದಲೂ ಸಿಗುತ್ತಿಲ್ಲ. ಅಧಿಕಾರಿಗಳು ತಾವೇ ಅಂತಿಮವಾಗಿದ್ದು, ಮಳಿಗೆ ಕೊಡುವುದು, ಬಿಡುವುದು ತಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಎಂಬುದಾಗಿ ಹೇಳುತ್ತಿದ್ದು, ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಳಿಗೆಗಳ ಇ-ಟೆಂಡರ್ ಪ್ರಕ್ರಿಯೆ ತಡೆ ಹಿಡಿದು, ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕು. ಸಾಮಾನ್ಯರು, ಪರಿಶಿಷ್ಟರು, ವಿಕಲಚೇತನರಿಗೆ ಮಳಿಗೆ ಮೀಸಲಿಟ್ಟು, ಮಹಿಳೆಯರಿಗೆ ಯಾಕೆ ಮೀಸಲಿಟ್ಟಿಲ್ಲ ಎಂಬುದು ಕೆಲ ಸಂಘಟನೆಗಳು, ಬಿಡ್‌ದಾರರ ಪ್ರಶ್ನೆಯಾಗಿದೆ.

ಗೊಂದಲವಿದ್ದರೆ ಕಚೇರಿಗೆ ಬಂದು ಚರ್ಚಿಸಲಿ ನಿಲ್ದಾಣದ ಮಳಿಗೆಗಳನ್ನು ನೀಡುವ ಇ-ಟೆಂಡರ್ ಪ್ರಕ್ರಿಯೆ ಕಾನೂನುಬದ್ಧ, ಪಾರದರ್ಶಕವಾಗಿಯೇ ನಡೆದಿದೆ. 12 ಮಳಿಗೆಗಳು ಸಾಮಾನ್ಯ ವರ್ಗಕ್ಕೆ, 3 ಮಳಿಗೆ ಪರಿಶಿಷ್ಟ ಜಾತಿಗೆ, 1 ಮಳಿಗೆ ಪರಿಶಿಷ್ಟ ಪಂಗಡ, 2 ಮಳಿಗೆಗಳು ವಿಕಲ ಚೇತನರಿಗೆ ನಿಗದಿ ಪಡಿಸಿದೆ. ಮೆಡಿಕಲ್ ಶಾಪ್‌, ಫಿಜ್ಜಾ ಬರ್ಗರ್ ಶಾಪ್‌ ಹಾಗೂ ನಿಲ್ದಾಣದ ಮೇಲ್ಮಹಡಿ ಸೇರಿ ಒಟ್ಟು 3 ಮಳಿಗೆಗೆ ಯಾರೂ ಬಿಡ್ ಹಾಕಿಲ್ಲ. ಮಲೆಬೆನ್ನೂರು ನಿಲ್ದಾಣದ ಮಳಿಗೆಗೂ ಯಾರೂ ಇ-ಟೆಂಡರ್ ಹಾಕಿಲ್ಲ. ಹೊಸ ಬಸ್ಸು ನಿಲ್ದಾಣಕ್ಕೆ ಬಿಡ್‌ದಾರರು ಆನ್ ಲೈನ್ ಜೊತೆ ಮುಚ್ಚಿದ ಲಕೋಟೆಯಲ್ಲೂ ಅರ್ಜಿ ಹಾಕಿದ್ದಾರೆ. ಆನ್ ಲೈನ್ ಟೆಂಡರ್ ಆಗಿರುವುದರಿಂದ ಲೋಪವಾಗಿಲ್ಲ. ಪಾರದರ್ಶವಾಗಿ ಇ-ಟೆಂಡರ್ ಪ್ರಕ್ರಿಯೆ ಮಾಡಿದ್ದೇವೆ. ಅತೀ ಹೆಚ್ಚು ಬಿಡ್ ಮಾಡಿದವರಿಗೆ ಟೆಂಡರ್ ನೀಡಬೇಕು. ಏನಾದರೂ ಸಮಸ್ಯೆ ಇದ್ದರೆ ನಮ್ಮ ಕಚೇರಿಗೆ ಬಂದು, ಚರ್ಚಿಸಲಿ ಎಂದು ನಿಗಮದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.