ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕಎರಡು ಮೊಬೈಲ್ ಅಂಗಡಿಗಳ ಬೀಗ ಒಡೆದು ಲಕ್ಷಾಂತರ ಮೌಲ್ಯದ ಮೊಬೈಲ್ ಹಾಗೂ ನಗದು ಹಣ ಕಳ್ಳತನ ಮಾಡಿರುವ ಘಟನೆ ಶನಿವಾರ ಬೆಳಗಿನ ಜಾವ ನಗರದಲ್ಲಿ ಜರುಗಿದೆ. ಬೆಳಗಿನ ಜಾವ 4 ರಿಂದ 4.30ರ ಸುಮಾರಿನಲ್ಲಿ ಕಳ್ಳರ ಗ್ಯಾಂಗ್ ನಗರದ ಯಲ್ಲಪ್ಪ ಬಾಳಪ್ಪ ಗೋಸಬಾಳ ಎಂಬುವರ ಓಂ ಎಂಟರ್ ಪ್ರೈಸಸ್ ಮೊಬೈಲ್ ಅಂಗಡಿಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದಕ್ಕೂ ಮುಂಚೆ ಪಂಕಜ ಪೆಗ್ ಬಾರ್‌ನ ಬೀಗ ಒಡೆದು ಅಲ್ಲಿಯೂ ನಗದು ದೋಚಿರುವುದು ತಿಳಿದುಬಂದಿದೆ.
ಗೋಕಾಕ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರೀಶೀಲನೆ ನಡೆಸಿತು. ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ಳಂಬೆಳಿಗ್ಗೆ ಕಳ್ಳತನದ ಸುದ್ದಿ ತಿಳಿಯುತ್ತಿದ್ದಂತೆ ತಂಡೋಪ ತಂಡವಾಗಿ ಜನ ಆಗಮಿಸಿದ್ದರು.ಈ ಕುರಿತು ಸ್ಥಳಕ್ಕೆ ದೌಡಾಯಿಸಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಮಾತನಾಡಿ, ಈಗಾಗಲೇ ಅಂಗಡಿಯ ಸುತ್ತ-ಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದು, ಮೂವರು ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಮಾಡಿದ್ದಾರೆ. ಮೊಬೈಲ್ ಅಂಗಡಿ ಶೊಕೇಸ್‌ನಲ್ಲಿರುವ ಮೊಬೈಲ್‌ಗಳನ್ನು ಇಬ್ಬರು ಕಳ್ಳರು ಚಿಂದಿ ಆಯುವ ಚೀಲಗಳಲ್ಲಿ ಹೊರಗಡೆ ನಿಂತಿದ್ದ ಇನ್ನೊಬ್ಬ ಕಳ್ಳನಿಗೆ ಹಸ್ತಾಂತರಿಸಿರುವುದು ಕಂಡು ಬಂದಿದೆ. ಇದು ಅಂತಾರಾಜ್ಯ ಕಳ್ಳರ ಕೈಚಳಕವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಕಳ್ಳತನ ಮಾಡಿದ ವಸ್ತುಗಳ ನಿರ್ದಿಷ್ಟ ಮೌಲ್ಯ ತಿಳಿದು ಬಂದಿಲ್ಲ. ಸಿಸಿಟಿವಿಯಲ್ಲಿ ಮೂವರು ಕಳ್ಳರು ಕಾಣಿಸಿಕೊಂಡಿದ್ದು ಅವರೊಂದಿಗೆ ಇರುವ ಇನ್ನಿತರರ ಬಗ್ಗೆಯೂ ಗೊತ್ತಾಗಿಲ್ಲ. ಕಳ್ಳರ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ಕಳ್ಳರ ಜಾಲ ಪತ್ತೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಡಿ.ಎಚ್.ಮುಲ್ಲಾ, ಸಿಪಿಐ ರಾಯಗೊಂಡ ಜಾನಾರ, ಪಿಎಸೈ ಕೆ.ವಾಲಿಕಾರ ಸೇರಿದಂತೆ ಸಿಬ್ಬಂದಿ ಇದ್ದರು.