ಬುಧವಾರವಾರ ಸೇವಂತಿಗೆ ಹೂವು ಒಂದು ಕೆಜಿಗೆ 300 ರಿಂದ 400ರ ವರೆಗೆ ಮಾರಾಟವಾಗಿದೆ. ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದ್ದಂತೆ ಹೂವಿನ ಬೆಲೆ ಮತ್ತಷ್ಟು ಜಾಸ್ತಿಯಾಗಬಹುದು. ಗುರುವಾರದ ವೇಳೆಗೆ ಇನ್ನೂ ದುಬಾರಿಯಾಗಲಿದೆ.

ಗಗನಮುಖಿಯಾದ ಹೂ, ಹಣ್ಣು-ಹಂಪಲು । ಮಲ್ಲಿಗೆ ಮೊಗ್ಗು ಕೆಜಿಗೆ 1000 ರು. । ಸೇವಂತಿಗೆ ಕೆಜಿಗೆ 300 ರು.ಗೂ ಅಧಿಕ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಂದಡೆ ಜಿಲ್ಲೆಯನ್ನು ಬರ ಕಾಡುತ್ತಿದ್ದರೆ ಇನ್ನೊಂದಡೆ ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೂವಿನ ಬೆಲೆ ಗಗನ ಮುಟ್ಟಿದೆ. ಹಣ್ಣುಗಳು ಹಾಗೂ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಲೇ ಖರೀದಿ ಜೋರಾಗಿದ್ದು, ನಗರದ ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ. ರಸ್ತೆ ಹಾಗೂ ಹೊರವಲಯದ ಕೆ.ವಿ. ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು. ಬುಧವಾರವಾರ ಸೇವಂತಿಗೆ ಹೂವು ಒಂದು ಕೆಜಿಗೆ 300 ರಿಂದ 400ರ ವರೆಗೆ ಮಾರಾಟವಾಗಿದೆ. ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದ್ದಂತೆ ಹೂವಿನ ಬೆಲೆ ಮತ್ತಷ್ಟು ಜಾಸ್ತಿಯಾಗಬಹುದು. ಗುರುವಾರದ ವೇಳೆಗೆ ಇನ್ನೂ ದುಬಾರಿಯಾಗಲಿದೆ.

ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 150-200 ರು.ಗಳೊಳಗಿದ್ದು ಬುಧವಾರದಂದು ಕೆ.ಜಿ.ಗೆ 1000 ರು. ದಾಟಿತ್ತು. 400-500 ರು. ಇದ್ದ ಕನಕಾಂಬರ ಹೂವು 2500-3000 ರು., ಮಳ್ಳೆ ಹೂ ಕೆಜಿಗೆ 1000-1400 ರು.ಗೆ ತಲುಪಿದೆ. ಮಳೆ ಇಲ್ಲದಿರುವುದರಿಂದ ತಾವರೆ ಹೂವಿಗೆ ಕೊರತೆ ಕಾಣುತ್ತಿತ್ತು. ಯಾಕೆಂದರೆ ಲಕ್ಷ್ಮೀ ಹಬ್ಬಕ್ಕೆ ತಾವರೆ ಹಾಗೂ ಕೇದಗೆ ಬಹುಮುಖ್ಯವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ತಾವರೆ ಹೂವಿನ ಬೆಲೆ 80-100 ರು.. ಹಾಗೂ ಕೇದಗೆ 100-150 ರು. ಗೇರಿದೆ.

ಗುಲಾಬಿ ಕೆ.ಜಿ ರು. 180 ರಿಂದ 350, ಕಾಕಡ ಕೆಜಿಗೆ ರು. 1000 ರಿಂದ 1500, ಕೇವಲ 5-10 ರು.ಗೆ ಸಿಗುತ್ತಿದ್ದ ಚೆಂಡು ಹೂವಿನ ಬೆಲೆ ಇಂದು 40- 60 ರು.ಗೆ ತಲುಪಿದೆ. ಅಲಂಕಾರಿಕ ಹೂಗಳಾದ ಗ್ಲಾಡಿಯೋಲಸ್ 3 ಕಡ್ಡಿಗಳಿಗೆ ರು. 100, ಮತ್ತಿತರ ಹೂ ಗುಚ್ಚಗಳಿಗೆ 120- 200 ರು., ಗುಲಾಬಿ ಬಂಚ್ ಒಂದಕ್ಕೆ 250-400 ರು., ದವಣ, ಕಮಗಗ್ಗರಿ ಸೇರಿದಂತೆ ಸುವಾಸನಾ ಭರಿತ ಗಿಡಗಳಿಗೆ 150-200 ರು., ಪತ್ರೆ ಕೆಜಿಗೆ 100 ರು.ಗಳಿಗೆ ಮಾರಾಟವಾದವು. ಎಲ್ಲಡೆ ಮಳೆಯೇ ಇಲ್ಲದಿರುವುದರಿಂದ ಹೂವಿನ ಫಸಲು ಕಡಿಮೆಯಾಗಿದೆ. ತಮಿಳುನಾಡಿನಿಂದ ಮಲ್ಲಿಗೆ, ಮಳ್ಳೆ ಮತ್ತಿತರ ಹೂವುಗಳು ಬರುತ್ತವೆ.

ಸೇವಂತಿಗೆ, ಚೆಂಡು, ರೋಸ್ ಮತ್ತಿತರ ಹೂವುಗಳು ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಭಾಗಗಳಿಂದ ಬರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಪಕ್ಕದ ಆಂಧ್ರ ಪ್ರದೇಶ ,ತೆಲಾಂಗಾಣ, ತಮಿಳು ನಾಡು ಕಡೆಗಳಿಂದ ಮಾರಾಟಗಾರರು ಹೂಗಳನ್ನು ಕೊಳ್ಳಲು ಬರುತ್ತಿರುವುದರಿಂದ ಮೂರು-ನಾಲ್ಕು ದಿನದಿಂದೀಚೆಗೆ ಬೆಲೆಗಳು ಹೆಚ್ಚಾಗಿವೆ. ಹಬ್ಬಕ್ಕೆ ಇನ್ನಷ್ಟು ಏರಿಕೆಯಾಗಲಿವೆ.ಹೇಳಿ, ಕೇಳಿ ಹಬ್ಬಕ್ಕೆ ಹೂವು, ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಎಲ್ಲಾ ಬಗೆಯ ಹೂವುಗಳು ಗಗನಕ್ಕೇರಿವೆ ಎನ್ನುತ್ತಾರೆ ಮಾರಾಟಗಾರ ಅಶೋಕ್ ಕುಮಾರ್.

ಹೂವಿನ ದರ ಜತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಸೇಬು ಕೆ.ಜಿ ರು. 200ರಿಂದ 250, ಮರಸೇಬು 150-200, ಸಪೋಟ 160, ಫೈನಾಪಲ್ 60ರಿಂದ 80ಕ್ಕೆ, ಸೀಬೆ 80-120ಕ್ಕೆ ,ಮೂಸಂಬಿಯ ಬೆಲೆ 100-120 ರು. ದಾಟಿದೆ. ಬಾಳೆಹಣ್ಣಿನ ಬೆಲೆ ಕೇಳುವುದೇ ಬೇಡ. ಕಳೆದ ಎರಡುಮೂರು ದಿನಗಳಿಂದ ಬಾಳೆ ಹಣ್ಣಿನ ಬೆಲೆ ಏಲಕ್ಕಿ ಬಾಳೆ ಕೆ.ಜಿ. ಗೆ 100-150 ರು. ವರೆಗೆ, ಪಚ್ಚಬಾಳೆ 40-60 ರು.ಗೆ ಏರಿದೆ. ದಾಳಿಂಬೆ 160-250ರಕ್ಕೆ, ಕಪ್ಪು ದ್ರಾಕ್ಷಿ ಹಣ್ಣಿನ ಬೆಲೆ 240 ರು.ಗೆ ಹೆಚ್ಚಾಗಿದೆ. ತೆಂಗಿನ ಕಾಯಿಯ ಬೆಲೆ 35-70 ರು.ಗೆ ದಾಟಿದೆ.

ಹಬ್ಬದ ಹಿಂದಿನ ದಿನ ಬೆಲೆಗಳು ಜಾಸ್ತಿಯಾಗುತ್ತಿದ್ದುದು ಮಾಮೂಲು. ಮಾರುಕಟ್ಟೆಯಲ್ಲಿ ಅಂದು ವಿಪರೀತ ರಶ್ ಇರುತ್ತದೆ ಎಂದು ಮುಂಚಿತವಾಗಿಯೇ ಖರೀದಿಗೆ ಬಂದೆವು. ಆದರೆ, ಬೆಲೆಗಳು ಕಡಿಮೆಯೇನಿಲ್ಲ. ತುಂಬಾ ದುಬಾರಿ. ಕನಕಾಂಬರ 50 ಗ್ರಾಂ ಹೂವಿಗೆ 350 ರೂ. ಕೊಟ್ಟೆವು. ತಾವರೆ ಹೂವು ಸಣ್ಣ ಮೊಗ್ಗಿಗೂ 100 ರೂ. ಕೀಳುತ್ತಿದ್ದಾರೆ. ಈ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದ್ರೂ ಬರುತವೋ ಅನಿಸುತ್ತೆ ಎಂದರು ಖರೀದಿಗೆ ಬಂದಿದ್ದ ಗ್ರಾಹಕರಾದ ಸುಷ್ಮಾ, ಮಂಜುಳ ಮತ್ತು ನಿರ್ಮಲರವರು.ಸಿಕೆಬಿ-1 ನಗರದ ಎಪಿಎಂಸಿ ಹೂ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿದ್ದ ಹೂಗಳು ಹರಾಜಾಗುತ್ತಿರುವುದು

ಸಿಕೆಬಿ- 2 ಮತ್ತು 3 ಎಂಜಿ ರಸ್ತೆಯಲ್ಲಿ ಮಾರಾಟಕ್ಕೆ ಬಂದಿರುವ ಹೂ ಮತ್ತು ಹಣ್ಣುಗಳ ವ್ಯಾಪಾರಸ್ಥರು ಗ್ರಾಹಕರಿಗೆ

ಕಾಯುತ್ತಿರುವುದು