ಕಾರವಾರದಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿ ಭರಾಟೆ ಜೋರು

| Published : Nov 01 2024, 12:17 AM IST / Updated: Nov 01 2024, 12:18 AM IST

ಸಾರಾಂಶ

ದಸರಾಕ್ಕಿಂತ ಈ ಹಬ್ಬಕ್ಕೆ ಹೂವು ಹಣ್ಣಿದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಸವಿತಾ ಸರ್ಕಲ್, ಗ್ರೀನ್ ಸ್ಟ್ರೀಟ್, ಗಾಂಧಿ ಮಾರುಕಟ್ಟೆ ಅಂಗಡಿಗಳ ಎದುರು ಜನಜಂಗುಳಿ ನೆರೆದಿತ್ತು.

ಕಾರವಾರ: ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಳೆಗಟ್ಟಿದ್ದು, ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.

ದಸರಾಕ್ಕಿಂತ ಈ ಹಬ್ಬಕ್ಕೆ ಹೂವು ಹಣ್ಣಿದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಸವಿತಾ ಸರ್ಕಲ್, ಗ್ರೀನ್ ಸ್ಟ್ರೀಟ್, ಗಾಂಧಿ ಮಾರುಕಟ್ಟೆ ಅಂಗಡಿಗಳ ಎದುರು ಜನಜಂಗುಳಿ ನೆರೆದಿತ್ತು. ಕೆಲವರು ಗುರುವಾರ ಲಕ್ಷ್ಮೀ ಪೂಜೆ ನೆರವೇರಿಸಿದ್ದು, ಮತ್ತೆ ಕೆಲವರು ಶುಕ್ರವಾರ ಲಕ್ಷ್ಮೀ ಪೂಜೆ ಇಟ್ಟುಕೊಂಡಿದ್ದು, ಈಗಾಗಲೇ ಅಂಗಡಿ- ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಮನೆಗಳಿಗೆ, ಅಂಗಡಿಗಳಿಗೆ ಮಾಡಿದ ವಿದ್ಯುತ್ ದೀಪಗಳ ಅಲಂಕಾರ ಮನಸೂರೆಗೊಳಿಸುತ್ತಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಜೋರಾಗಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಜನರು ತುಂಬಿದ್ದರು. ಕರಾವಳಿ ಭಾಗದಲ್ಲಿ ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ತೆರಳಿ ಸಿಹಿ ಖಾದ್ಯ ನೀಡಿ ಶುಭ ಕೋರುವ ಸಂಪ್ರದಾಯವಿದ್ದು, ಹೀಗಾಗಿ ಸಿಹಿ ತಿಂಡಿ ತಿನಿಸುಗಳ ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಕಂಡುಬಂದರು. ಹೂವು- ಹಣ್ಣು, ಬಾಳೆ ಗಿಡ, ಮವಿನ ತೋರಣ, ಸಿಹಿ ತಿಂಡಿ ಹಾಗೂ ದೀಪ ಹಚ್ಚಲು ವಿವಿಧ ವಿನ್ಯಾಸ ಹಾಗೂ ಆಕಾರಗಳ ಹಣತೆಗಳ ಖರೀದಿಯಲ್ಲಿ ಗ್ರಾಹಕರು ನಿರತರಾಗಿದ್ದರು. ಹಬ್ಬದ ದರ: ಸೀತಾಫಲ ₹೧೦೦, ದಾಳಿಂಬೆ ₹೧೪೦- ೧೫೦, ಕಿತ್ತಳೆ ₹೮೦, ಸೇಬುಹಣ್ಣು ₹೧೦೦- ೧೩೦, ಆಕಾಶ ಬುಟ್ಟಿ ₹೨೦, ₹೧೦೦, ₹೨೮೦, ₹೩೨೦, ₹೪೫೦ ಆಕಾರ, ಗಾತ್ರದ ಮೇಲೆ ದರವಿತ್ತು. ಬಾಳೆಗಿಡ ಜೋಡಿಗೆ ₹80, ಚೆಂಡು ಹೂವು 5 ಮಾರಿಗೆ ₹250, ಸೇವಂತಿ ₹೧೫೦, ಮಾಲೆ ₹೧೫೦, ತುಳಸಿ ಮಾಲೆ ಮಾರಿಗೆ ₹7೦ರಿಂದ 1೦೦, ಹಣತೆ ಪಿಂಗಾಣಿ ಒಂದಕ್ಕೆ ₹೨೦, ಮಣ್ಣಿನ ಹಣತೆ ಡಜನ್‌ಗೆ ₹೩೦, ₹೫೦, ದೊಡ್ಡ ಗಾತ್ರದ ಹಣತೆ ಒಂದಕ್ಕೆ ₹೭೫ ದರವಿತ್ತು.ಮೈಸೂರು ಪಾಕ್ ೨೦೦ ಗ್ರಾಂಗೆ ₹೧೩೦, ಬೇಸನ ಲಡ್ಡು ₹೧೦೦, ಹಲ್ವಾ ₹೮೦, ರಾಜಬೋಗ್ ₹೧೨೪, ಗುಲಾಬ್ ಜಾಮೂನ್ ₹೮೦ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹಬ್ಬದ ಹಿನ್ನೆಲೆಯಲ್ಲಿ ಶಿಗ್ಗಾಂವಿ, ಹಾವೇರಿ, ಗದಗ, ಧಾರವಾಡ, ಬೆಂಗಳೂರು ಭಾಗಗಳಿಂದ ವ್ಯಾಪಾರಸ್ಥರು ಬಂದಿದ್ದು, ಕಳೆದ ದಸರಾ ಹಬ್ಬದಷ್ಟೆ ಹೂವು- ಹಣ್ಣಿನ ದರವಿತ್ತು. ಇಲ್ಲಿನ ಮಿತ್ರ ಸಮಾಜದಲ್ಲಿ ಹಸಿರು ಪಟಾಕಿ ಅಂಗಡಿಗಳನ್ನು ತೆರೆಯಲಾಗಿದ್ದು, ವ್ಯಾಪಾರ ಜೋರಾಗಿದೆ. ಅಂಗಡಿಗಳ ಎದುರು ಪಟಾಕಿ ಖರೀದಿಗೆ ಗ್ರಾಹಕರು ಜಮಾಯಿಸಿದ್ದರು. ವಾಣಿಜ್ಯ ಮಳಿಗೆ, ಶೋ ರೂಮ್, ಬಂಗಾರ, ಬಟ್ಟೆ ಅಂಗಡಿಗಳಲ್ಲಿ ಕೂಡಾ ವ್ಯಾಪಾರ ವಹಿವಾಟು ಜೋರಾಗಿದೆ. ಗ್ರಾಹಕರು ಕುಟುಂಬ ಸಮೆತ ಆಗಮಿಸಿ ಬಟ್ಟೆ, ಬಂಗಾರ ಖರೀದಿ ನಡೆಸಿದರು. ಗೃಹಬಳಕೆ ವಸ್ತುಗಳಾದ ಟಿವಿ, ಫ್ರಿಜ್ಡ್, ವಾಷಿಂಗ್ ಮಷಿನ್ ಸೇರಿಂತೆ ವಿವಿಧ ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರಸ್ಥರು ದೀಪಾವಳಿ ಹಿನ್ನೆಲೆ ವಿಶೇಷ ಕೊಡುಗೆಗಳ, ರಿಯಾಯಿತಿ ದರದ ಮೂಲಕ ಜನರನ್ನು ಆಕರ್ಷಿಸುತ್ತಿರುವುದು ಕಂಡುಬಂತು.