ಸಾರಾಂಶ
ಈ ಬಾರಿಯ ಅತಿವೃಷ್ಟಿಯ ಪರಿಣಾಮವಾಗಿ ಹಲವೆಡೆ ಬೆಳೆ ಹಾನಿಯಾಗಿದ್ದರೂ ರೈತರ ಮನಸ್ಸಿನಲ್ಲಿ ದೀಪಾವಳಿಯ ಹರ್ಷ ಕಮ್ಮಿಯಾಗಿರಲಿಲ್ಲ.
ಹನುಮಸಾಗರ: ಗ್ರಾಮಾಂತರ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿದೆ.
ಸೋಮವಾರದ ಸಂತೆ ದಿನವಾಗಿದ್ದರಿಂದ ಹನುಮಸಾಗರದಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ಸಣ್ಣ, ದೊಡ್ಡ ಅಂಗಡಿಗಳು, ಹಣ್ಣು-ಹಂಪಲು, ಹೂವುಗಳು ಹಾಗೂ ಅಲಂಕಾರಿಕ ವಸ್ತುಗಳ ಅಂಗಡಿಗಳ ಮುಂದೆ ಜನಸಂದಣಿ ಕಂಡುಬಂತು.ಈ ಬಾರಿಯ ಅತಿವೃಷ್ಟಿಯ ಪರಿಣಾಮವಾಗಿ ಹಲವೆಡೆ ಬೆಳೆ ಹಾನಿಯಾಗಿದ್ದರೂ ರೈತರ ಮನಸ್ಸಿನಲ್ಲಿ ದೀಪಾವಳಿಯ ಹರ್ಷ ಕಮ್ಮಿಯಾಗಿರಲಿಲ್ಲ. “ಒಮ್ಮೆ ಹಬ್ಬ ಬಂದರೆ ಎಲ್ಲ ಕಷ್ಟ ಮರೆತು ಸಂತೋಷಪಡುವ ಸಮಯ” ಎಂದು ರೈತರು ಹೇಳುತ್ತಿದ್ದರು. ಹಬ್ಬದ ಸಡಗರ ಮನೆ ಮನೆಗೆ ಹರಡಿದ್ದು, ಮಕ್ಕಳು ಪಟಾಕಿ ಖರೀದಿಯಲ್ಲಿ, ಮಹಿಳೆಯರು ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಹನುಮಸಾಗರಕ್ಕೆ ಸುತ್ತಲಿನ ಯಲಬುಣಚಿ, ಬೆನಕನಾಳ, ಮಡಿಕೇರಿ, ಹಿರೇಗೊಣ್ಣಾಗರ, ಹನುಮನಾಳ, ಹೂಲಗೇರಿ, ಯರಗೇರಾ, ಚಳಗೇರಿ ಸೇರಿದಂತೆ ಅನೇಕ ಗ್ರಾಮಗಳಿಂದ ಜನರು ಆಗಮಿಸಿ ಖರೀದಿಯಲ್ಲಿ ನಿರತರಾಗಿದ್ದರು. ಹಳೆಯ ಬಜಾರಿನ ಜವಳಿ ಅಂಗಡಿಗಳು ಹೊಸ ಬಟ್ಟೆಗಳಿಂದ ತುಂಬಿಕೊಂಡಿದ್ದು, ವಿದ್ಯುತ್ ದೀಪಗಳು, ಪ್ಲಾಸ್ಟಿಕ್ ಹೂಗಳು, ರಂಗೋಲಿ ಪುಡಿ, ಹಣತೆಗಳು, ಆಕಾಶ ಬುಟ್ಟೆಗಳು, ಪಟಾಕಿಗಳು ಮುಂತಾದ ವಸ್ತುಗಳು ಹೆಚ್ಚು ಮಾರಾಟವಾಗುತ್ತಿದ್ದವು.ಹಬ್ಬದ ಸಿದ್ಧತೆಯಲ್ಲಿ ಮಹಿಳೆಯರು ಹಲವು ದಿನಗಳಿಂದ ತೊಡಗಿಕೊಂಡಿದ್ದರು. ಹಬ್ಬಕ್ಕೆ ಮನೆ ಸಜ್ಜುಗೊಳಿಸಿ, ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದಾರೆ. ಮಕ್ಕಳು ಪಟಾಕಿ ಮತ್ತು ಚಾಕಲೇಟ್ ಖರೀದಿಸಿ ಸಂತೋಷಪಟ್ಟರು. ಸಂಜೆ ವೇಳೆಗೆ ದೀಪಾಲಂಕಾರ ಸೊಬಗು ಹಬ್ಬ ರಂಗೇರುವಂತೆ ಮಾಡಿತು.