ಎಂ.ಕೆ.ಹರಿಚರಣತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದಾದ್ಯಂತ ಫುಟ್‌ ಪಾತ್ ನಲ್ಲಿ ಅಂಗಡಿಗಳು ತಲೆ ಎತ್ತಿರುವುದರಿಂದ ಪಾದಚಾರಿಗಳು ಫುಟ್‌ ಪಾತ್ ಸಂಚರಿಸದೇ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ನಿತ್ಯ ಹೊಸ ಹೊಸದಾಗಿ ಫುಟ್‌ ಪಾತ್ ಅಂಗಡಿಗಳು ತಲೆಯೆತ್ತುತ್ತಲೇ ಇದ್ದು, ಪುರಸಭೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮೌನವಾಗಿವೆ.

ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯೇ ಸಾರ್ವಜನಿಕರಿಗೆ ತಿರುಗಾಡಲು ಪಾದಚಾರಿ ಮಾರ್ಗ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಫುಟ್‌ ಪಾತ್ ರಸ್ತೆಯಲ್ಲಿ ಅತಿಕ್ರಮಿಸಿಕೊಂಡಿರುವ ವ್ಯಾಪಾರಿಗಳು. ಪಟ್ಟಣದಲ್ಲಿ ಪಾದಚಾರಿಗಳು ಅನುಭವಿಸುತ್ತಿರುವ ಸಂಕಷ್ಟದ ಸ್ಥಿತಿ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕಾಣುತ್ತಿಲ್ಲ.

ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರು ಮಹಾನಗರ, ಮೈಸೂರು, ಹಾಸನ, ಮಂಗಳೂರು ಮುಂತಾದ ಕಡೆಗಳೆಲ್ಲಾ ಜೆಸಿಬಿ ಸದ್ದು ಮಾಡುತ್ತಾ ಫುಟ್‌ ಪಾತ್ ಅಂಗಡಿಗಳ ತೆರವು ಕಾರ್ಯ ನಡೆಯುತ್ತಿದೆ. ಸಚಿವ ಕೃಷ್ಣ ಬೈರೈಗೌಡರ ಗಟ್ಟಿ ನಿಲುವಿಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ದೊರಕಿದ್ದರೂ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾತ್ರ ಎಲ್ಲೆಂದರಲ್ಲಿ ನಿತ್ಯ ಹೊಸದಾಗಿ ಫುಟ್ ಪಾತ್ ಅಂಗಡಿಗಳು ತಲೆಯೆತ್ತುತ್ತಲೇ ಇವೆ.


ಪಟ್ಟಣದ ಮುಖ್ಯರಸ್ತೆಯ ಪೊಲೀಸ್ ಠಾಣೆ ಪಕ್ಕದಲ್ಲಿಯೇ ಹೊಸದಾಗಿ ಅಂಗಡಿಗಳು ತಲೆಯೆತ್ತಿದ್ದು ನಿಷ್ಕ್ರಿಯವಾಗಿರುವ ಸರ್ಕಾರಿ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಪಟ್ಟಣದಲ್ಲಿ ಸುಮಾರು ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಅಗ್ರಹಾರ, ಹಳೇ ಕೆ.ಆರ್.ಪೇಟೆ, ಸುಭಾಷ್ ನಗರ, ಜಯನಗರ, ಹೇಮಾವತಿ ಬಡಾವಣೆ, ಬಸವೇಶ್ವರ ನಗರ, ಮುತ್ತುರಾಯಸ್ವಾಮಿ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿವೆ.

ಪಟ್ಟಣ ದಿನೇ ದಿನೇ ವಿಸ್ತಾರಗೊಳ್ಳುತ್ತಲೇ ಇದೆ. ಎಪಿಎಂಸಿ ಯಲ್ಲಿ ಎಳನೀರು ವ್ಯಾಪಾರ, ಸೊಪ್ಪು ತರಕಾರಿ ವ್ಯಾಪಾರ, ಸಂತೇ ವ್ಯಾಪಾರ ಸೇರಿದಂತೆ ನಿತ್ಯ ವಹಿವಾಟು ನಡೆಯುತ್ತದೆ. ದಿನನಿತ್ಯ ಸಾವಿರಾರು ರೈತರು ಪಟ್ಟಣಕ್ಕೆ ಆಗಮಿಸುತ್ತಾರೆ. ಎಲ್.ಕೆ.ಜಿಯಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ, ಐ.ಟಿ.ಐ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜಿನವರೆಗೆ ಸುಮಾರು 20ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿವೆ. ನಿತ್ಯ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಆಗಮಿಸುತ್ತಾರೆ.

ಮದುವೆ ಮತ್ತಿತರ ಶುಭ ಕಾರ್ಯಗಳಿಗೂ ಸಾವಿರಾರು ಜನ ಪಟ್ಟಣಕ್ಕೆ ಆಗಮಿಸುತ್ತಾರೆ. ಇದರ, ಜೊತೆಗೆ ತಾಲೂಕು ಕಚೇರಿ, ಬ್ಯಾಂಕ್ ವ್ಯವಹಾರ, ಆಸ್ತಿ ನೋಂದಣಿ ಸೇರಿದಂತೆ ವಿವಿಧ ವ್ಯವಹಾರಗಳಿಗೆ ನಿತ್ಯ ತಾಲೂಕಿನ ಮೂಲೆ ಮೂಲೆಗಳಿಂದ ಜನ ಪಟ್ಟಣಕ್ಕೆ ಬರುತ್ತಾರೆ. ಪಟ್ಟಣ ನಿತ್ಯ ಜನಜಂಗುಳಿಯಿಂದ ತುಂಬಿರುತ್ತದೆ.

ಆದರೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯವಾದ ಪಾದಚಾರಿ (ಫುಟ್‌ ಪಾತ್) ಮಾರ್ಗವೇ ಇಲ್ಲ. ಮೈಸೂರು ಕಡೆಯಿಂದ ಪಟ್ಟಣ ಪ್ರವೇಶಿಸುವ ಕಾಗುಂಡಿ ಹಳ್ಳದಿಂದ ಹಿಡಿದು ಗ್ರಾಮಭಾರತಿ ವೃತ್ತದವರೆಗೆ, ಹೊಸಹೊಳಲು ಕಡೆಯಿಂದ ಆಗಮಿಸುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಿಂದ ಹಿಡಿದು ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ವರೆಗೆ ಸಾರ್ವಜನಿಕರ ಫುಟ್‌ ಪಾತ್ ಅತಿಕ್ರಮಣವಾಗಿದೆ.

ಹೂವು, ಹಣ್ಣು ತರಕಾರಿ, ಬಟ್ಟೆ, ಪಪ್ಪಲಿ ಮಾರುವವರು, ಪಾನಿಪುರಿ, ಕಬಾಬ್ ಮಾರುವವರಿಂದ ಹಿಡಿದು ಕಾರು ಮಾರಾಟ, ಸ್ಕೂಟರ್ ಮಾರಾಟ, ಫರ್ನಿಚರ್ ಮಾರಾಟ ಮಾಡುವವರವರೆಗೆ ಎಲ್ಲಾ ಬಗೆಯ ವ್ಯಾಪಾರಿಗಳೂ ಸಾರ್ವಜನಿಕರ ಫುಟ್‌ ಪಾತ್ ಅತಿಕ್ರಮಿಸಿದ್ದಾರೆ. ಕೆಲ ಅಂಗಡಿ ಮಾಲೀಕರೂ ಶೀಟ್ ಹಾಕಿಕೊಂಡು ತಮ್ಮ ಅಂಗಡಿಗಳನ್ನು ಫುಟ್‌ ಪಾತ್ ವರೆಗೂ ವಿಸ್ತರಿಸಿಕೊಂಡಿದ್ದಾರೆ.

ಕೆಲವೆಡೆ ಜೆಸಿಬಿ ಯಂತ್ರ, ರಿಗಿಂಗ್ ಯಂತ್ರಗಳನ್ನೂ ಬಾಡಿಗೆ ನೀಡುವವರು ತಮ್ಮ ವಾಹನಗಳನ್ನು ಫುಟ್‌ ಪಾತ್ ನಲ್ಲಿ ದಿನಗಟ್ಟಲೆ ನಿಲ್ಲಿಸುತ್ತಾರೆ. ವಾಹನ ಸವಾರರು ಹಾಗೂ ಖಾಸಗಿ ಸಾರಿಗೆ ವಾಹನಗಳು ರಸ್ತೆಯನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

ಸರಿಯಾದ ಫುಟ್‌ ಪಾತ್ ಇಲ್ಲದೆ ಜನರು ರಸ್ತೆ ಮದ್ಯೆ ನಡೆಯುತ್ತಿದ್ದಾರೆ. ಇದರಿಂದ ವಾಹನಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸುತ್ತಿವೆ. ಆದರೆ, ಪೊಲೀಸ್ ಇಲಾಖೆ ಅಥವಾ ಪುರಸಭೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಜನಸಂಚಾರಕ್ಕೆ ಸುಗಮ ದಾರಿ ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ.ಫುಟ್‌ ಪಾತ್ ತೆರವು ಕಾರ್ಯಚರಣೆ ಆರಂಭಿಸಿದಾಗ ರಾಜಕಾರಣಿಗಳ ಮಧ್ಯಪ್ರವೇಶವಾಗುತ್ತದೆ. ರಾಜಕಾರಣಿಗಳಿಗೆ ಅಕ್ರಮ ವ್ಯಾಪಾರಿಗಳ ಪರ ಬರುತ್ತದೆ. ಬೆರಳೆಣಿಕೆಯಷ್ಟು ವ್ಯಾಪಾರಿಗಳ ಹಿತರಕ್ಷಣೆಗಾಗಿ ಪಟ್ಟಣಕ್ಕೆ ನಿತ್ಯ ಆಗಮಿಸುವ ಸಾವಿರಾರು ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತವನ್ನು ಬಲಿಕೊಡಲಾಗುತ್ತಿದೆ.

-ಸಂತೋಷ್ ಕುಮಾರ್, ಕಾಲೇಜು ವಿದ್ಯಾರ್ಥಿ

ಪುರಸಭೆ ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಫುಟ್ ಪಾತ್ ಒತ್ತುವರಿ ತೆರವುಗೊಳಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ರಸ್ತೆಯಲ್ಲಿ ವಾಹನಗಳು, ಫುಟ್ ಪಾತ್ ನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಬೇಕು.

- ಕೆ.ಎಸ್.ಸುರೇಶ್ ಕುಮಾರ್, ಪಟ್ಟಣದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರು