ಸಾರಾಂಶ
ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆ ಅಳವಡಿಕೆಗೆ ನೀಡಲಾಗಿದ್ದ ಗಡುವು ಫೆ.29 ಕೊನೆಗೊಳ್ಳಲಿದ್ದು, ಮಾ.1ರಿಂದ ಈ ಆದೇಶ ಪಾಲನೆ ಮಾಡದ ಮಳಿಗೆಗಳ ವ್ಯಾಪಾರ ಪರವಾನಿಗಿ ರದ್ದುಪಡಿಸಿ ದಂಡ ವಿಧಿಸಲಾಗುವುದು. ಅಲ್ಲದೆ, ಅಂತಹ ಮಳಿಗೆಗಳಿಗೆ ಬೀಗಮುದ್ರೆ ಹಾಕಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆ ಅಳವಡಿಕೆಗೆ ನೀಡಲಾಗಿದ್ದ ಗಡುವು ಗುರುವಾರಕ್ಕೆ (ಫೆ.29) ಕೊನೆಗೊಳ್ಳಲಿದ್ದು, ಮಾ.1ರಿಂದ ಈ ಆದೇಶ ಪಾಲನೆ ಮಾಡದ ಮಳಿಗೆಗಳ ವ್ಯಾಪಾರ ಪರವಾನಿಗಿ ರದ್ದುಪಡಿಸಿ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು. ಅಲ್ಲದೆ, ಅಂತಹ ಮಳಿಗೆಗಳಿಗೆ ಬೀಗಮುದ್ರೆ ಹಾಕಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನಕ್ಕೆ ಅವಧಿ ಫೆ.29ಕ್ಕೆ ಮುಗಿದಿದೆ. ಆದರೂ ಇನ್ನು ನೂರಾರು ಮಂದಿ ಕನ್ನಡ ಅನುಷ್ಠಾನಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಕನ್ನಡ ಭಾಷಾ ಫಲಕ ಅಳವಡಿಕೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಪ್ರದರ್ಶನದ ಅನುಷ್ಠಾನ ಪ್ರಾಧಿಕಾರವಾಗಿರುವ ಬಿಬಿಎಂಪಿಯ ಆರೋಗ್ಯ ವಿಭಾಗದವರು ಇದುವರೆಗೂ 55 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಮತ್ತು ಅಂಗಡಿಗಳಿಗೆ ನೋಟಿಸ್ ಕಳುಹಿಸಿದ್ದಾರೆ.
ಆರೋಗ್ಯ ನಿರೀಕ್ಷಕರು, ಮಾರ್ಷಲ್‌ಗಳನ್ನು ನಿಯೋಜಿಸಿ ಮತ್ತು ನಿರಂತರ ತಪಾಸಣೆಯ ಮೂಲಕ ಇದುವರೆಗೂ 40 ಸಾವಿರಕ್ಕೂ ಹೆಚ್ಚು ಅಂಗಡಿ ಮತ್ತು ಸಂಸ್ಥೆಗಳಲ್ಲಿ ಕನ್ನಡ ಭಾಷಾ ಫಲಕ ಜಾರಿಗೊಳಿಸಲಾಗಿದೆ.
ಉಳಿದವರು ಮಾರ್ಚ್ 1ರ ಒಳಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಪದ ಬಳಕೆ ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ. ನಗರದಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರಿಗಳು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿ ಹೊರಡಿಸಿದ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಪ್ರದರ್ಶಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಆದೇಶ ಪಾಲಿಸದ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಲಾಗಿದ್ದು, ನಿಯಮಗಳನ್ನು ಪಾಲಿಸದ ಕೆ.ಆರ್.ಪುರನ ಹಿರಿಯ ಆರೋಗ್ಯ ನಿರೀಕ್ಷಕರನ್ನು ಬಿಬಿಎಂಪಿ ಅಮಾನತುಗೊಳಿಸಿದೆ.
ಒಟ್ಟಾರೆ, ಮಾ.1ರ ನಂತರ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಪದ ಬಳಕೆ ಇರಬೇಕು, ಇಲ್ಲದಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಹೀಗಿದ್ದರೂ ಕೆಲವು ವಾಣಿಜ್ಯ ಸಂಸ್ಥೆಗಳು, ಹೋಟೆಲ್‌ಗಳವರು, ಮನರಂಜನಾ ಸಂಸ್ಥೆಗಳು ನಾಮಫಲಕದಲ್ಲಿ ಕನ್ನಡ ಬಳಕೆ ಮಾಡಿಲ್ಲ.
ಅಂತಹ ಕೇಂದ್ರಗಳಿಗೆ ಬೀಗ ಮುದ್ರೆ ಹಾಕುವಂತೆ ವಿಶೇಷ ಆಯುಕ್ತ ಸುರೋಳ್ಕರ್ ಕಿಶೋರ್ ಸುತ್ತೋಲೆ ಮೂಲಕ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಎಷ್ಟು ಅಳವಡಿಕೆ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಫೆ.28ರೊಳಗೆ 55,187 ವಾಣಿಜ್ಯ ಮಳಿಗೆ/ಉದ್ದಿಮೆಗಳಿಗೆ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿತ್ತು.
ನಿಗದಿತ ವೇಳೆಗೆ 52,134 ವಾಣಿಜ್ಯ ಉದ್ದಿಮೆಗಳು ತಮ್ಮ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅನುಷ್ಠಾನಗೊಳಿಸಿವೆ. ಕನ್ನಡ ಭಾಷೆಯ ನಾಮಫಲಕಗಳನ್ನು ಅನುಷ್ಠಾನಗೊಳಿಸದಿರುವ 3044 ವಾಣಿಜ್ಯ ಉದ್ದಿಮೆಗಳ ಮೇಲೆ ಅಗತ್ಯ ಕ್ರಮ ಜರುಗಿಸಲು ಸೂಚಿಸಲಾಗಿದೆ.