ಸಾರಾಂಶ
ಮಂಡ್ಯ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿದ ಬೆಂಕಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಭಸ್ಮವಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದ ತಾಯಿ ಹಾಗೂ ನಾಲ್ವರು ಪುಟ್ಟ ಮಕ್ಕಳು ಪಾರಾಗಿರುವ ಘಟನೆ ಚಿಕ್ಕಮಂಡ್ಯ ಕೆರೆ ಅಂಗಳದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ನಡೆದಿದೆ. ಕಾಲೋನಿಯ ಸಲ್ಮಾನ್ ಪಾಷಾ ಮನೆಯಲ್ಲಿ ಅವಘಡ ನಡೆದಿದ್ದು, ಸದ್ಯ ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ. ಮಧ್ಯಾಹ್ನ ಸಲ್ಮಾನ್ ಪಾಷಾ, ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಮಲಗಿದ್ದರು. ೨.೩೦ರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಸಲ್ಮಾನ್ ಪಾಷಾ ಟೀ ಕುಡಿಯಲು ಹೊರಗೆ ಹೋಗಿದ್ದಾರೆ. ಕೆಲ ಹೊತ್ತಿನಲ್ಲೇ ವಿದ್ಯುತ್ ಬಂದಿದ್ದು, ಫ್ಯಾನ್ ವೈಯರ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಆದರೆ, ಮನೆಯಲ್ಲಿ ಮಲಗಿದ್ದ ಸಲ್ಮಾನ್ ಪಾಷಾ ಪತ್ನಿ ನಾಸಿಯಬಾನು ಮತ್ತು ಮಕ್ಕಳಿಗೆ ಗೊತ್ತಾಗಲಿಲ್ಲ. ಬೆಂಕಿ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಹೊಗೆಯಿಂದ ಎಚ್ಚರಗೊಂಡು ಹೊರಗೆ ಓಡಿ ಬಂದು ಕಿರುಚಿ ಕೊಂಡಿದ್ದಾರೆ. ತಕ್ಷಣ ಅಕ್ಕಪಕ್ಕದ ಮನೆಯ ಜನತೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಬಟ್ಟೆ, ಧವಸ, ಧಾನ್ಯಗಳು ಸೇರಿದಂತೆ ಎಲ್ಲ ಕಾಗದ ಪತ್ರಗಳು ಆಹುತಿ ಆಗಿವೆ. ಸುದ್ದಿ ತಿಳಿದ ಅಗ್ನಿಶಾಮಕ ದಳ ಹಾಗೂ ಸೆಂಟ್ರಲ್ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.