ಚುಚ್ಚಿಯೂ ನೋಯಿಸದ, ಗಾಂಭೀರ್ಯದ ಸಂಗತಿಗಳಲ್ಲೂ ಹಾಸ್ಯವನ್ನೇ ಹರಿಸುವ ಕನ್ನಡದ ಚುಟುಕು ಚುಟುಕಾದ ಸಾಹಿತ್ಯ ಎಲ್ಲರಿಗೂ ಹಿತವಾದುದು ಎಂದು ಖ್ಯಾತ ಸಾಹಿತಿ ಎಚ್.ಡುಂಡಿರಾಜ ತಿಳಿಸಿದರು.

ಹಾನಗಲ್ಲ:ಚುಚ್ಚಿಯೂ ನೋಯಿಸದ, ಗಾಂಭೀರ್ಯದ ಸಂಗತಿಗಳಲ್ಲೂ ಹಾಸ್ಯವನ್ನೇ ಹರಿಸುವ ಕನ್ನಡದ ಚುಟುಕು ಚುಟುಕಾದ ಸಾಹಿತ್ಯ ಎಲ್ಲರಿಗೂ ಹಿತವಾದುದು ಎಂದು ಖ್ಯಾತ ಸಾಹಿತಿ ಎಚ್.ಡುಂಡಿರಾಜ ತಿಳಿಸಿದರು.

ಭಾನುವಾರ ಹಾನಗಲ್ಲಿನ ಸಿ.ಎಂ. ಉದಾಸಿ ವೇದಿಕೆಯಲ್ಲಿ ೮೯ನೇ ನಾಡಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಚುಟುಕು ಸಾಹಿತ್ಯ ಕನಕನ ಕಿಂಡಿಯಂತೆ. ತುಂಬ ಕಡಿಮೆ ಶಬ್ದಗಳಲ್ಲಿ ದೊಡ್ಡ ಸಾಹಿತ್ಯವನ್ನೇ ನೀಡುವ ಶಕ್ತಿ ಇದೆ. ಕನ್ನಡದಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಕನ್ನಡದ ಶಕ್ತಿ ಅರಿಯಲು ಮುಂದಾಗಬೇಕು. ಹಾಸ್ಯ ಚುಟುಕುಗಳಿಗೆ ಹೆಚ್ಚು ಮಾನ್ಯತೆಯೂ ಇದೆ. ಶರಣರ ವಚನಗಳು, ದಿನಕರ ದೇಸಾಯಿ ಅವರ ಸಾಹಿತ್ಯವೂ ಒಂದು ರೀತಿಯ ಚುಟುಕುಗಳೇ ಆಗಿವೆ. ಜನರಿಗೆ ಪುರುಸೊತ್ತಿಲ್ಲದ ಕಾಲದಲ್ಲಿ ದೀರ್ಘ ಕಾವ್ಯ ಓದುವ ತಾಳ್ಮೆಯೇ ಇಲ್ಲದಂತೆ ಇರುವವರಿಗೆ ಚುಟುಕುಗಳು ಮಹಾಕಾವ್ಯದ ಅನುಭವವನ್ನೇ ನೀಡಬಲ್ಲವು. ಇದು ವೇಗದ ಯುಗಕ್ಕೆ ಹೇಳಿ ಮಾಡಿಸಿದ ಸಾಹಿತ್ಯ ಎಂದರು.

ಸಾನಿಧ್ಯವಹಿಸಿ ಮಾತನಾಡಿದ ಹೇರೂರಿನ ಗುಬ್ಬಿ ನಂಜುಂಡೇಶ್ವರ ಶಿವಾಚಾರ್ಯ ಶ್ರಿಗಳು, ಸಾಹಿತ್ಯ ಸಂಸ್ಕೃತಿಯ ಕಾರ್ಯಕ್ರಮಗಳು ಸಂಸ್ಕಾರ ಕೇಂದ್ರಿತ ಕಾರ್ಯಕ್ರಮಗಳಾಗಿವೆ. ಸಂಗೀತ ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ದಸರೆಯ ೯ ದಿನಗಳು ಭಕ್ತಿಯ ದಿನಗಳು. ಶಕ್ತಿ ರೂಪಿಣಿ ದೇವಿಯ ಆರಾಧನೆಗೆ ಇದು ಅತ್ಯಂತ ಸೂಕ್ತ ಕಾಲ. ನಮಗೆ ಗುರು ಸ್ಮರಣೆ ಬೇಕು. ನಮ್ಮ ಮಾತು ಕೃತಿಗಳಿಗೆ ಮೌಲ್ಯಗಳಿರಬೇಕು ಎಂದರು.

ತಿಳವಳ್ಳಿಯ ಬಸವರನಿರಂಜನ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಸಂಸ್ಕಾರವನ್ನು ಬಿತ್ತಿ ಮಕ್ಕಳ ಭಿವಷ್ಯದಲ್ಲಿ ಅದನ್ನೇ ಬೆಳೆಯಬೇಕು. ಈಗ ಮಕ್ಕಳಿಗೆ ಆಧ್ಯಾತ್ಮ ಚಿಂತನೆಯ ಅಗತ್ಯವಿದೆ. ಕೌಟುಂಬಿಕ ಸಂಬಂಧಗಳೇ ದೂರವಾಗುತ್ತಿರುವ ಸಂದರ್ಭಗಳಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಇಡೀ ಕುಟುಂಬ ಒಂದಾಗಿ ಬೆರೆಯುವ ಸಂಸ್ಕೃತಿಗೆ ಮುಂದಾಗಬೇಕು ಎಂದರು.

ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕ ಕೆ.ಎಲ್.ದೇಶಪಾಂಡೆ ಅತಿಥಿಗಳಾಗಿದ್ದರು. ಶರಣ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ರವಿಬಾಬು ಪೂಜಾರ, ತಮ್ಮಣ್ಣ ಆರೆಗೊಪ್ಪ ವೇದಿಕೆಯಲ್ಲಿದ್ದರು. ಉದಯ ನಾಸಿದ ಆಶಯ ನುಡಿ ನುಡಿದರು. ಸಂಗೀತ ಕಲಾವಿದ ಜಗದೀಶ ಮಡಿವಾಳರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಭಾರ್ಗವಿ ಪುರೋಹಿತ ಕಾರ್ಯಕ್ರಮ ನಿರೂಫಿಸಿದರು.