ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ 12ರ ಹೊತ್ತಿಗೆ ಸಿಲಿಂಡರ್ ಖಾಲಿಯಾಗಿದ್ದು, ಬೆಳಗಿನ ತಿಂಡಿಗೆ ಮಾತ್ರ ಅದು ಸಾಕಾಗಿದೆ. ಮಧ್ಯಾಹ್ನ ರೊಟ್ಟಿ, ಪಲ್ಯೆ ಹಾಗೂ ಅನ್ನ, ಸಾರು ಮಾಡಲು ಸಿಲಿಂಡರ್ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮೊಸರನ್ನ ಕೊಡಲಾಯಿತು.
ಧಾರವಾಡ:
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ವಾಣಿಜ್ಯ ಬಳಕೆ ಸಿಲಿಂಡರ್ ಸಿಗದೆ ಹೋಟೆಲ್ ಬಾಗಿಲು ಮುಚ್ಚುವ ಆತಂಕ ಎದುರಿಸುತ್ತಿದ್ದರೆ, ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್‌ನಲ್ಲಿ ಬುಧವಾರ ಸಿಲಿಂಡರ್ ಕೊರತೆಯಿಂದ ಬರೀ ಮೊಸರನ್ನ ಕೊಡಲಾಗಿದೆ.ಇಲ್ಲಿಯ ಮಿನಿ ವಿಧಾನಸೌಧದ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ 12ರ ಹೊತ್ತಿಗೆ ಸಿಲಿಂಡರ್ ಖಾಲಿಯಾಗಿದ್ದು, ಬೆಳಗಿನ ತಿಂಡಿಗೆ ಮಾತ್ರ ಅದು ಸಾಕಾಗಿದೆ. ಮಧ್ಯಾಹ್ನ ರೊಟ್ಟಿ, ಪಲ್ಯೆ ಹಾಗೂ ಅನ್ನ, ಸಾರು ಮಾಡಲು ಸಿಲಿಂಡರ್ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮೊಸರನ್ನ ಕೊಡಲಾಯಿತು. ಅದು ಸಹ ಮಧ್ಯಾಹ್ನ 1.30ಕ್ಕೆ ಖಾಲಿಯಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಊಟಕ್ಕಾಗಿ ಇಂದಿರಾ ಕ್ಯಾಂಟೀನ್‌ಗೆ ಆಗಮಿಸಿ ಖಾಲಿ ಹೊಟ್ಟೆಯಿಂದ ಮರಳಿದರು.
ಕ್ಯಾಂಟೀನ್ ಸ್ಥಿತಿ:ನಿತ್ಯ 500 ಜನರಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅದಕ್ಕಾಗಿ ಕನಿಷ್ಠ ಎರಡು ವಾಣಿಜ್ಯ ಸಿಲಿಂಡರ್ ಬಳಕೆ ಮಾಡುತ್ತೇವೆ. ಆದರೆ, ಬುಧವಾರ ನಮ್ಮ ಬಳಿ ಒಂದೇ ಸಿಲಿಂಡರ್ ಇತ್ತು. ಅದರಿಂದ ಬೆಳಗಿನ ತಿಂಡಿ ಮಾತ್ರ ಆಗಿದ್ದು, ಮಧ್ಯಾಹ್ನಕ್ಕೆ ಅನ್ನ ಮಾಡಲಾಗಿತ್ತು. ಸಾರು ಹಾಗೂ ರೊಟ್ಟಿ ಮಾಡಲು ಸಿಲಿಂಡರ್ ಖಾಲಿಯಾದ ಕಾರಣ ಮೊಸರನ್ನ ಮಾಡಿ ಕೊಡಲಾಗಿದೆ. ಸಿಲಿಂಡರ್ ಬಂದರೆ ಗುರುವಾರ ಆಹಾರ ಸಿದ್ಧವಾಗಲಿದೆ. ಇಲ್ಲದೇ ಹೋದಲ್ಲಿ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಹೇಳಿದರು. ಇದೇ ಬರೀ ಮಿನಿ ವಿಧಾನಸೌಧದಲ್ಲಿನ ಇಂದಿರಾ ಕ್ಯಾಂಟೀನ್ ಅಲ್ಲದೇ ಎಲ್ಲ ಕ್ಯಾಂಟೀನ್‌ಗಳ ಪರಿಸ್ಥಿತಿ ಆಗಿದೆ.
ಧಾರವಾಡಕ್ಕೆ ವಿವಿಧ ಜಿಲ್ಲೆಗಳಿಂದ ಶೈಕ್ಷಣಿಕ ತರಬೇತಿಗೆ ಸಾವಿರಾರು ವಿದ್ಯಾರ್ಥಿಗಳು ಬಂದಿದ್ದಾರೆ. ಬರೀ ಸ್ಪರ್ಧಾತ್ಮಕ ಪರೀಕ್ಷೆ ಮಾತ್ರವಲ್ಲದೇ ಎಸ್‌ಎಸ್‌ಎಲ್‌ಸಿ, ನವೋದಯ ಕೋಚಿಂಗ್ ಪಡೆಯುವ ವಿದ್ಯಾರ್ಥಿಗಳು ಹಾಗೂ ಪಿಯುಸಿ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ವಸತಿ ನಿಲಯ, ಪಿಜಿಗಳಲ್ಲಿ ಇರುವ ಈ ವಿದ್ಯಾರ್ಥಿಗಳಿಗೆ ಊಟ ಕೊಡಲು ಪಿಜಿ ಮಾಲೀಕರಿಗೆ ತಲೆನೋವಾಗಿದೆ.ಕರ್ನಾಟಕ ಕಾಲೇಜಿನಿಂದ ಶುರುವಾಗಿ ಸಪ್ತಾಪುರ, ಜಯನಗರ, ಶ್ರೀನಗರ, ಕಲ್ಯಾಣನಗರ, ಯಾಲಕ್ಕಿ ಶೆಟ್ಟರ್ ಕಾಲನಿಯ ನೂರಾರು ಪಿಜಿಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಸಿಲಿಂಡರ್‌ಗಳ ಅಭಾವದಿಂದ ಅವರಿಗೆ ಊಟದ ವ್ಯವಸ್ಥೆ ಮಾಡುವುದು ಹೇಗೆ? ಎಂಬ ಸಂಕಷ್ಟದಲ್ಲಿ ಪಿಜಿ ಮಾಲೀಕರು ಸಿಲುಕಿದ್ದಾರೆ. ಸೀಮಿತ ಸಿಲಿಂಡರ್ ಇರುವ ಕಾರಣ ಸಂಪೂರ್ಣ ಊಟದ ಬದಲು ಉಪಾಹಾರಕ್ಕೆ ಉಪ್ಪಿಟ್ಟು, ಊಟಕ್ಕೆ ಪಲಾವ್ ಮಾತ್ರ ನೀಡಲು ನಿರ್ಧರಿಸಿದ್ದಾರೆ.
ಶಾಲಾ-ಕಾಲೇಜುಗಳ ಪರೀಕ್ಷೆ ನಡೆಯುತ್ತಿದ್ದು, ಇನ್ನೊಂದು ತಿಂಗಳು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇರುತ್ತಾರೆ. ಅಷ್ಟರಲ್ಲಿ ಸಿಲಿಂಡರ್ ಕೊರತೆಯಿಂದ ನಮ್ಮ ಪಿಜಿ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆಯಾಗಿದೆ. ನಮ್ಮಲ್ಲಿ 170 ವಿದ್ಯಾರ್ಥಿನಿಯರು ಇದ್ದು, ಊಟದ ಬದಲು ಬರೀ ಪಲಾವ್ ಕೊಡಲಾಗುತ್ತಿದೆ. ಹೆಚ್ಚೆಂದರೆ ಇನ್ನೆರಡು ದಿನ ಅವರಿಗೆ ಅಡುಗೆ ಮಾಡಿ ಕೊಡಬಹುದು. ಅಷ್ಟರಲ್ಲಿ ಸಿಲಿಂಡರ್ ಬಂದರೆ ಪೂರ್ಣ ಊಟ. ಇಲ್ಲದೇ ಹೋದಲ್ಲಿ ಏನು ಮಾಡುವುದು ಎಂದು ನಮಗೂ ತಿಳಿಯುತ್ತಿಲ್ಲ ಎಂದು ಸಪ್ತಾಪುರದ ಅಶ್ವಿನಿ ಮಾಲೀಕರಾದ ಮಹಾಂತೇಶ ಅವರು ಕಳವಳ ವ್ಯಕ್ತಪಡಿಸಿದರು.ಮನೆ ಬಳಕೆಯ ಸಿಲಿಂಡರ್‌ಗೂ ಬರ:
ಧಾರವಾಡ ಜಿಲ್ಲೆಯಲ್ಲಿ ವಾಣಿಜ್ಯ ಅಲ್ಲದೇ ಮನೆ ಬಳಕೆಯ ಸಿಲಿಂಡರ್‌ಗಳಿಗೂ ಕೊರತೆಯಾಗಿದೆ. ಆದರೆ, ಜಿಲ್ಲಾಡಳಿತವಾಗಲಿ ಅಥವಾ ಉಸ್ತುವಾರಿ ಸಚಿವರಾಗಲಿ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಹೋಟೆಲ್ ಬಂದ್ ಆಗುವ ಸ್ಥಿತಿಗೆ ಬಂದಿದ್ದು, ಇಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಅತ್ತ ಪಿಜಿಯಲ್ಲೂ, ಇತ್ತ ಹೋಟೆಲ್‌ನಲ್ಲಿ ಊಟವಿಲ್ಲದೇ ಪರದಾಡುವ ಸ್ಥಿತಿ ಬರುವ ಮುಂಚೆಯೇ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಹೋಟೆಲ್ ಮಾಲೀಕರು ಹಾಗೂ ಪಿಜಿ ಮಾಲೀಕರು ಆಗ್ರಹಿಸುತ್ತಾರೆ.