ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ

| Published : May 18 2024, 12:34 AM IST

ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಕವಿತಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಕಾದುಕುಳಿತಿರುವ ರೋಗಿಗಳು.

ಕನ್ನಡಪ್ರಭ ವಾರ್ತೆ ಕವಿತಾಳ

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರ ಕೊರತೆಯಿಂದ ರೋಗಿಗಳು ಚಿಕಿತ್ಸೆಗೆ ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿಯ ಕರ್ತವ್ಯ ನಿರ್ವಹಿಸುತ್ತಿದ್ದ ಮಕ್ಕಳ ತಜ್ಞ ಡಾ.ಸುಶಾಂತ ಎರಡು ತಿಂಗಳಿಂದ ಅನಧಿಕೃತ ಗೈರಾಗಿದ್ದು, ಜನ ಅನಿವಾರ್ಯವಾಗಿ ದೂರದ ಸಿಂಧನೂರು, ಲಿಂಗಸುಗೂರು ಮತ್ತು ರಾಯಚೂರು ನಗರಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತಾಗಿದೆ, ಅಪೌಷ್ಠಿಕ ಮಕ್ಕಳಿಗೂ ಸಕಾಲದಲ್ಲಿ ಚಿಕಿತ್ಸೆ ದೊರೆಯದಂತಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.

25 -30 ಸಾವಿರ ಜನಸಂಖ್ಯೆ ಹೊಂದಿದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಕಾಡುತ್ತಿದೆ. ಪ್ರತಿ ನಿತ್ಯ ಅಂದಾಜು 250-300 ಹೊರರೋಗಿಗಳು ಮತ್ತು 50-60 ಒಳ ರೋಗಿಗಳು ಚಿಕಿತ್ಸೆಗೆ ಬರುವ ಈ ಆಸ್ಪತ್ರೆಯಲ್ಲಿ, ಪ್ರಸ್ತುತ ಒಬ್ಬ ಬಿಎಎಂಎಸ್ ವೈದ್ಯರು ಹಾಗೂ ಒಬ್ಬ ಎನ್ಸಿಡಿ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ರೋಗಗಿಳು ಕಾಯ್ದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಅಪಘಾತ, ಮತ್ತಿತರ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿ ಇದೆ. 24x7 ಒಬ್ಬ ಬಿಎಎಂಎಸ್ ವೈದ್ಯರೇ ಸೇವೆ ಒದಗಿಸುವಂತಾಗಿದೆ.

ಇಲ್ಲಿನ ಪ್ರಭಾರ ಆಡಳಿತ ವೈದ್ಯಾಧಿಕಾರಿ ಆಗಿರುವ ಡಾ.ಮಲ್ಲಿಕಾರ್ಜುನ ಬಲ್ಲಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಿಂದಾಗಿ ಆಡಳಿತ ನಿರ್ವಹಣೆಗೆ ಕಷ್ಟವಾಗುತಿದೆ. ಉನ್ನತ ಶಿಕ್ಷಣಕ್ಕೆ ತೆರಳುವ ಹಿನ್ನೆಲೆ ಮಕ್ಕಳ ತಜ್ಞ ವೈದ್ಯ ಡಾ.ಸುಶಾಂತ ತೆರಳಿದ್ದು ಇದೀಗ ರಜೆ ಪಡೆದಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವರಾಜ ತಿಳಿಸಿದ್ದಾರೆ.

ಸಿಎಚ್‌ಸಿ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪ್ರತಿಭಟನೆ ಹೋರಾಟ ನಡೆಸಿದ್ದರೂ ಯಾವುದೇ ಸರ್ಕಾರ ವೈದ್ಯರ ನೇಮಕ ಮಾಡುವಲ್ಲಿ ಕಾಳಜಿ ವಹಿಸುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ವೈದ್ಯರ ನೇಮಕ ಮಾಡಬೇಕು ಎಂದು ಪಪಂ ಮಾಜಿ ಸದಸ್ಯ ಮೌನೇಶ ಹಿರೇಕುರಬರ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಹೊಸದಾಗಿ ಯಾರಾದರೂ ಸೇವೆಗೆ ಬರುವುದಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು, ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಕವಿತಾಳದ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಯಾಗಿ ಪ್ರಭಾರ ವಹಿಸುಕೊಳ್ಳುತ್ತೇನೆ. ಸದ್ಯ ಲಭ್ಯವಿರುವ ವೈದ್ಯರ ಸೇವೆ ಬಳಿಸಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವದರತ್ತ ಗಮನ ಹರಿಸಲಾಗವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವರಾಜ ಹೇಳಿದರು.