ಆಸ್ಪತ್ರೆಯಲ್ಲಿ ವೈದ್ಯರ ಕೊರತೆ; ಶಾಸಕರ ಗಮನಕ್ಕೆ ತಂದ ನಾಗರೀಕರು

| Published : Jul 29 2025, 01:01 AM IST

ಸಾರಾಂಶ

ಕೆ.ಆರ್‌.ಪೇಟೆ ತಾಲೂಕಿನ 1 ತಾಲೂಕು ಆರೋಗ್ಯಕೇಂದ್ರ, 2 ಸಮುದಾಯ ಆರೋಗ್ಯಕೇಂದ್ರ, 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಬಹುತೇಕ ವೈದ್ಯರು ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದಾರೆ. ವೈದ್ಯರು ಇಲ್ಲದೆ ಸಮಸ್ಯೆ ಎದುರಾಗಿದೆ. ತಾಲೂಕು ಆರೋಗ್ಯ ಕೇಂದ್ರದಲ್ಲಿ 295ಕ್ಕೆ 85 ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಕವಚ ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು ಅವರಿಗೆ ಸ್ಥಳೀಯ ನಾಗರಿಕರು ವೈದ್ಯರ ಕೊರತೆ ಬಗ್ಗೆ ಗಮನಕ್ಕೆ ತಂದರು.

ನಂತರ ಮಾತನಾಡಿದ ಶಾಸಕರು, ತಾಲೂಕಿನ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯರ ಕೊರತೆ ಕಾಡುತ್ತಿದೆ. ಬಲುದೊಡ್ಡ ಹೋಬಳಿ ಕೇಂದ್ರ ಕಿಕ್ಕೇರಿಯಲ್ಲಿಯೂ ವೈದ್ಯರ ಕೊರತೆ ಇದೆ. ವೈದ್ಯರ ನೇಮಕ ಕುರಿತು ಸರ್ಕಾರದ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ವೈದ್ಯರು, ಸಿಬ್ಬಂದಿ ಚಿಕಿತ್ಸೆಗೆ ಬರುವ ರೋಗಿಗಳೊಂದಿಗೆ ಸೌಜನ್ಯತೆ ವರ್ತಿಸಬೇಕು. ಒತ್ತಡವಿದೆ ಎಂದು ತಾಳ್ಮೆ ಕಳೆದುಕೊಳ್ಳಬಾರದು. ನಿಮ್ಮ ಮೃದು ಮಾತು ಅರ್ಧ ರೋಗಿಗಳ ಸಮಸ್ಯೆ ದೂರ ಮಾಡಲಿದೆ ಎಂದರು.

ಆಸ್ಪತ್ರೆಯಲ್ಲಿ ಸಿಬ್ಬಂದಿ ರೋಗಿಗಳೊಂದಿಗೆ ಅನುಚೀತವಾಗಿ ವರ್ತಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ವೈದ್ಯರು ಬಾರದಂತಾಗಿದೆ. ಸರ್ಕಾರಕ್ಕೆ ಸಿಬ್ಬಂದಿಗಾಗಿ ಒತ್ತಡ ಹಾಕಲಾಗುತ್ತಿದೆ ಎಂದರು.

ಆಸ್ಪತ್ರೆಯಲ್ಲಿ ವೈದ್ಯರು ತಿಳಿಸುವ ಮುನ್ನವೇ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಮತ್ತಿತರ ಪರೀಕ್ಷೆ ಮಾಡಿಸಿಕೊಳ್ಳಲು ಏಜೆಂಟರಂತೆ ವರ್ತಿಸುತ್ತಿರುವ ದೂರು ಬಂದಿದೆ. ಇದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು.

ಆರೋಗ್ಯ ರಕ್ಷಾ ಕವಚ ಸಭೆ ಕಡ್ಡಾಯವಾಗಿ ಮಾಡಬೇಕು. ಆಶಾ ಕಾರ್ಯಕರ್ತೆಯರು, ವೈದ್ಯರು, ರೋಗಿಗಳ ಮಧ್ಯೆ ಉತ್ತಮ ಸಂಪರ್ಕ ಕಲ್ಪಿಸಬೇಕು. ಸಮಸ್ಯೆಗಳಿದ್ದಲ್ಲಿ ತಿಳಿಸಬೇಕು ಎಂದರು.

ತಾಲೂಕಿನ 1 ತಾಲೂಕು ಆರೋಗ್ಯಕೇಂದ್ರ, 2 ಸಮುದಾಯ ಆರೋಗ್ಯಕೇಂದ್ರ, 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಬಹುತೇಕ ವೈದ್ಯರು ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದಾರೆ. ವೈದ್ಯರು ಇಲ್ಲದೆ ಸಮಸ್ಯೆ ಎದುರಾಗಿದೆ. ತಾಲೂಕು ಆರೋಗ್ಯ ಕೇಂದ್ರದಲ್ಲಿ 295ಕ್ಕೆ 85 ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇದ್ದಾರೆ ಎಂದರು.

ವೈದ್ಯಾಧಿಕಾರಿ ಡಾ.ಸೌಜನ್ಯ ಮಾತನಾಡಿ, ಹೋಬಳಿ ಕೇಂದ್ರದ ಆಸ್ಪತ್ರೆಗೆ ನಿತ್ಯ 150 ಕ್ಕೂ ಹೆಚ್ಚು ಜನತೆ ವಿವಿಧ ಆರೋಗ್ಯ ತಪಾಸಣೆಗೆ ಬರುತ್ತಾರೆ. ಸಿಬ್ಬಂದಿ ಕೊರತೆ ಇದ್ದರೂ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಆಸ್ಪತ್ರೆಯಲ್ಲಿ ವಿವಿಧ ಸಮಸ್ಯೆಗಳನ್ನು ತೋಡಿಕೊಂಡರು.

ಇದೇ ವೇಳೆ ಸ್ಥಳೀಯರು, ರಾತ್ರಿ ವೇಳೆಯಲ್ಲಿ ವೈದ್ಯರಿಲ್ಲದೆ ದೂರದ ತಾಲೂಕು ಕೇಂದ್ರಗಳಿಗೆ ತೆರಳಲು ಕಷ್ಟವಾಗುತ್ತಿದೆ. ಖಾಸಗಿ ಪ್ರಯೋಗಾಲಯದಲ್ಲಿ ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಒತ್ತಾಯಿಸುತ್ತಾರೆ. ಕೂಲಿ ಕಾರ್ಮಿಕರು, ಬಡವರಿಗೆ ಆರ್ಥಿಕ ಸಮಸ್ಯೆಇದೆ. ರಕ್ತ ಪರೀಕ್ಷೆ, ಪ್ರಸೂತಿ ಕೇಂದ್ರ ಆರಂಭವಾಗಿ ನಾಲ್ಕೈದು ತಿಂಗಳಾಗಿದೆ. ಸಮರ್ಪಕ ಸೇವೆ ಕೊಡಿಸಿ ಎಂದು ಅಲವತ್ತುಕೊಂಡರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಭಾರತೀಪ್ರಕಾಶ್, ಕಾಯಿ ಮಂಜೇಗೌಡ, ಕೆ.ಜಿ.ಪುಟ್ಟರಾಜು, ಮಧು, ನೇತ್ರಾ, ಮುರುಳೀಧರ್, ಶೇಖರ್, ಮಲ್ಲೇಶ್, ಡಾ.ಸುಪ್ರೀತ್, ಡಾ.ಚಂದನ್, ಪಿಡಿಒಚಲುವರಾಜ್ ಮತ್ತಿತರರಿದ್ದರು.