ವಿವಿಗಳಿಗೆ ಅನುದಾನ ಕೊರತೆ: ಭಿಕ್ಷೆ ಬೇಡಿ ಆಕ್ರೋಶ

| Published : Feb 18 2025, 12:31 AM IST

ವಿವಿಗಳಿಗೆ ಅನುದಾನ ಕೊರತೆ: ಭಿಕ್ಷೆ ಬೇಡಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ ಹೊಸ ವಿವಿಗಳನ್ನು ಇಂದಿನ ಸರ್ಕಾರ ಅನುದಾನ ಕೊರತೆಯ ನೆಪವೊಡ್ಡಿ ಮುಚ್ಚಲು ಹೊರಟಿದೆ ಇದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಅನುದಾನ ಕೊರತೆ ನೆಪವೊಡ್ಡಿ ರಾಜ್ಯದ 9 ವಿವಿಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಭಿಕ್ಷೆ ಬೇಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ವಿವಿಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರಗಳಾಗಿವೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ. ಅಂತಹ ವಿವಿಗಳಿಗೆ ಮೂಲಭೂತ ಸೌಲಭ್ಯ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ ಹೊಸ ವಿವಿಗಳನ್ನು ಇಂದಿನ ಸರ್ಕಾರ ಅನುದಾನ ಕೊರತೆಯ ನೆಪವೊಡ್ಡಿ ಮುಚ್ಚಲು ಹೊರಟಿದೆ ಇದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಈಚೆಗೆ ನಡೆದ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ಆರ್ಥಿಕ ಸಮಸ್ಯೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ನೆಪ ಹೇಳಿ ವಿವಿಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿ. ವಿವಿಗಳ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಸಭೆ ಕರೆದು ಸಲಹೆ ಪಡೆಯಬೇಕು. ಆದರೆ, ಯಾರನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ರಾಜಕೀಯ ಕೇಂದ್ರಿತ ನಿರ್ಧಾರ ತೆಗೆದುಕೊಳ್ಳುವುದು ಖಂಡನೀಯ ಎಂದರು.

ನಂತರ ಚೆನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಬಿವಿಪಿ ಮಹಾನಗರ ಕಾರ್ಯದರ್ಶಿ ಸಿದ್ಧಾರ್ಥ್ ಕೋರಿ ಸೇರಿದಂತೆ ನೂರಾರು ವಿದ್ಯಾಾರ್ಥಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಪೊಲೀಸರೊಂದಿಗೆ ವಾಗ್ವಾದ: ಅಂಗಿ ಹರಿತು!

ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಎಬಿವಿಪಿ ಕಾರ್ಯಕರ್ತರು ಸಾರ್ವಜನಿಕರಿಂದ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಇದರಿಂದ ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆದು ವಾಹನಗಳ ದಟ್ಟನೆಯುಂಟಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ವಾಹನಗಳ ಸಂಚಾರಕ್ಕೆ ತೊಂದರೆ ಮಾಡದಂತೆ ಸೂಚಿಸಿದರು. ಆಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ಏರ್ಪಟ್ಟಿತು. ಈ ವೇಳೆ ಪ್ರತಿಭಟನಾಕಾರರನ ಅಂಗಿಯೂ ಹರಿಯಿತು. ಇದನ್ನು ಪೊಲೀಸರೇ ಹರಿದಿದ್ದಾರೆ ಎಂದು ಆ ವಿದ್ಯಾರ್ಥಿ ಆರೋಪಿಸಿದ್ದು ನಡೆಯಿತು. ಕೊನೆಗೆ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.