ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ: ಗರ್ಭಿಣಿಯರ ಪರದಾಟ

| Published : Apr 14 2025, 01:23 AM IST

ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ: ಗರ್ಭಿಣಿಯರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಹೊಸ ಆದೇಶದಂತೆ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆ ಮತ್ತು ಸಿಸೇರಿಯನ್ ಆದವರನ್ನು ಹೆಚ್ಚುವರಿಯಾಗಿ ಎರಡು ದಿನ ಒಳರೋಗಿಗಳಾಗಿ ಇರಿಸಿಕೊಂಡು ಡಿಸ್‌ಚಾರ್ಜ್ ಮಾಡುತ್ತಿರುವುದರಿಂದ ಹೊಸದಾಗಿ ದಾಖಲಾಗುವವರಿಗೆ ಬೆಡ್‌ ಸಿಗುತ್ತಿಲ್ಲ. ಬೆಂಗಳೂರು ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌ಗಲೂ ಸಿಗದೆ ಸಂಕಷ್ಟ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಲ್ಲಿಯ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ಗರ್ಭಿಣಿಯರು ಬೆಡ್‌ ಸಿಗದೆ, ಆಸ್ಪತ್ರೆಗೆ ದಾಖಲಾಗಲೂ ಸಾಧ್ಯವಾದೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌ಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಮೂರು ದಿನಗಳಿಂದ ಹೆರಿಗೆಗೆಂದು ಬರುತ್ತಿರುವ ತುಂಬು ಗರ್ಭಿಣಿಯರಿಗೆ ಹಾಸಿಗೆ ಸಿಗುತ್ತಿಲ್ಲ. ನೀವು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಹೋಗಿ ಎಂದು ಆಸ್ಪತ್ರೆಯ ವೈದ್ಯರು ಬರೆದು ಕೊಡುತ್ತಿದ್ದಾರೆ. ವಾಣಿವಿಲಾಸ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌ಗಳ ಕೊರತೆ ಉಂಟಾಗಿದೆ.

ಬೆಡ್‌ ಸಿಗದೆ ಪರದಾಟ

ಹಣವಿದ್ದವರು ಖಾಸಗಿ ಆ್ಯಂಬುಲೆನ್ಸ್, ಖಾಸಗಿ ವಾಹನಗಳ ಮೊರೆ ಹೋದರೆ, ಮತ್ತೆ ಕೆಲವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಆದರೆ ಹಣವಿಲ್ಲದ ಬಡ ಗರ್ಭಿಣಿಯರು ಆ್ಯಂಬುಲೆನ್ಸ್ ಸಿಗದೆ, ಖಾಸಗಿ ಆಂಬ್ಯುಲೆನ್ಸ್ ಮತ್ತು ಖಾಸಗಿ ವಾಹನಗಳಿಗೆ ಹಣವಿಲ್ಲದೇ, ಆಸ್ಪತ್ರೆಯ ಕಾರಿಡಾರ್‌ನಲ್ಲೇ, ಯಾರಾದರು ಹೆರಿಗೆ ಆದವರು ಡಿಸ್‌ಚಾರ್ಜ್ ಆದರೆ ತಮಗೆ ಬೆಡ್ ಸಿಗುತ್ತದೆ ಎಂಬ ಆಶಾಭಾವನೆಯಿಂದ ಕಾಯುತ್ತಿದ್ದಾರೆ.

ಹೆರಿಗೆಗೆಂದು ನಮ್ಮ ಮಗಳನ್ನು ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆ ಹೆರಿಗೆಗೆಂದು ಬಂದು 3 ಗಂಟೆಗಳಾಗಿದೆ. ಆದರೆ ಬೆಡ್ ಇಲ್ಲ. ಸಿಜೇರಿಯನ್ ಮಾಡಬೇಕು. ನೀವು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಹೋಗಿ ಎಂದು ಹೇಳುತ್ತಾರೆ. ಮೂರು ದಿನದ ಹಿಂದೆ ಚೆಕಪ್‌ಗೆ ಕರೆ ತಂದಿದ್ದಾಗ ಇಂದು ಹೆರಿಗೆಯಾಗುತ್ತದೆ ಎಂದು ಹೇಳಿದ್ದರು. ಈಗ ಬೆಡ್ ಇಲ್ಲ ಎಂದರೆ ನಾವು ಎಲ್ಲಿಗೆ ಹೋಗೋದು. ಎರಡು ಗಂಟೆಯಿಂದ ಕಾದರೂ ಆ್ಯಂಬುಲೆನ್ಸ್ ಸಿಗುತ್ತಿಲ್ಲಾ ಎಂದು ವೇಣುಗೋಪಾಲ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.ಕೇವಲ 25 ಬೆಡ್‌ ಮೀಸಲು

ಆಸ್ಪತ್ರೆಯ ನೋಡೆಲ್ ವೈದ್ಯಾಧಿಕಾರಿ ಡಾ.ವಿಜಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿ ಗರ್ಭಿಣಿಯರಿಗೆ 25 ಬೆಟ್‌ಗಳನ್ನು ಮೀಸಲಿಡಲಾಗಿದೆ. ಮೊದಲಾದರೆ ಸಾಮಾನ್ಯ ಹೆರಿಗೆಯಾದವರನ್ನು 2 ದಿನ, ಸಿಸೇರಿಯನ್ ಆದವರನ್ನು ಐದು ದಿನ ಒಳರೋಗಿಗಳಾಗಿ ಇರಿಸಿಕೊಂಡು ಡಿಸ್‌ಚಾರ್ಜ್ ಮಾಡುತ್ತಿದ್ದೆವು. ಆದರೆ ಈಗ ಸರ್ಕಾರದ ಹೊಸ ಆದೇಶದಂತೆ ಸಾಮಾನ್ಯ ಹೆರಿಗೆ ಮತ್ತು ಸಿಸೇರಿಯನ್ ಆದವರನ್ನು ಹೆಚ್ಚುವರಿಯಾಗಿ ಎರಡು ದಿನ ಒಳರೋಗಿಗಳಾಗಿ ಇರಿಸಿಕೊಂಡು ಡಿಸ್‌ಚಾರ್ಜ್ ಮಾಡುತ್ತಿರುವುದರಿಂದ ತೊಂದರೆಯಾಗಿದೆ ಎಂದರು.

ಈ ಕುರಿತು ಶಾಸಕ ಪ್ರದೀಪ್ ಈಶ್ವರ್ ರನ್ನು ಸಂಪರ್ಕಿಸಿದಾಗ, ಈ ಸಮಸ್ಯೆ ತಮ್ಮ ಗಮನಕ್ಕೆ ಬಂದಿದೆ. ಚಿಕ್ಕಬಳ್ಳಾಪುರ ನಗರದಲ್ಲಿರುವ ಹಳೆ ತಾಲ್ಲೂಕು ಆಸ್ಪತ್ರೆಯನ್ನು 150 ಹಾಸಿಗಳ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಿದ್ದು, ಅದರಲ್ಲಿ 25 ಹಾಸಿಗೆಗಳನ್ನು ಗರ್ಭಿಣಿಯರಿಗೆ, 25 ಹಾಸಿಗೆಗಳನ್ನು ಪ್ರಸವ ವಾದ ಬಾಣಂತಿಯರಿಗೆ, 25 ಹಾಸಿಗೆಗಳನ್ನು ಅಬಾರ್ಷನ್, ರಕ್ತಸ್ರಾವ ಮತ್ತಿತರ ಗರ್ಭಿನಿಯರಿಗೆ ಹಾಗೂ ಉಳಿದ 75 ಹಾಸಿಗೆಗಳನ್ನು ಮಕ್ಕಳಿಗೆ ಮೀಸಲಿಟ್ಟಿದೆ ಎಂದರು.

ಸಚಿವರ ಜತೆ ಚರ್ಚಿಸಿ ಕ್ರಮ

ಇದರೊಂದಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆರೆಯ ಆಂಧ್ರದ ಗಡಿ ಭಾಗಗಳಿದಲೂ ಗರ್ಭಿಣಿಯರು, ರೋಗಿಗಳು ಇಲ್ಲಿಗೆ ಬರುತ್ತಿರುವುದೂ ಸಮಸ್ಯೆಯಾಗಿದೆ. ಕ್ಷೇತ್ರದ ಜನತೆಗಾಗಿ ತಮ್ಮ ಸ್ವಂತ ಖರ್ಚಿನಿಂದ ಉಚಿತವಾಗಿ 10 ಅಮ್ಮ ಆ್ಯಂಬುಲೆನ್ಸ್ ಗಳನ್ನು ಬಿಟ್ಟಿದ್ದೇನೆ. ಮೆಡಿಕಲ್ ಕಾಲೇಜಿನ ಡೀನ್ ಮತ್ತು ಸಚಿವ ಡಾ.ಎಂ.ಸಿ. ಸುಧಾಕರ್ ರೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡು ಹಿಡಿದು ಜನರಿಗಾಗುವ ತೊಂದರೆ ನಿವಾರಿಸುವ ಭರವಸೆ ನೀಡಿದರು.

.