- ಆನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರ । ವೈದ್ಯ-ಸಿಬ್ಬಂದಿ ವಿರುದ್ಧ ಶಾಸಕರಿಗೆ ದೂರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಆನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗ, ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಬೇಕಾದ ಬಿಪಿ, ಶುಗರ್ ಹಾಗೂ ಇನ್ಸುಲಿನ್, ಔಷಧಿಗಳ ತೀವ್ರ ಕೊರತೆ ಕಂಡುಬಂದಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಆಸ್ಪತ್ರೆಯ ಔಷಧಿ ದಾಸ್ತಾನು ಪರಿಶೀಲಿಸಿದ ಶಾಸಕರು, ಅಗತ್ಯ ಔಷಧಿಗಳು ಇಲ್ಲದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಇನ್ಸುಲಿನ್ ಇಂಜೆಕ್ಷನ್, ಬಿಪಿ ಹಾಗೂ ಇತರೆ ಔಷಧಿಗಳನ್ನು ತರಿಸಿಕೊಳ್ಳುವಂತೆ ಸ್ಥಳದಲ್ಲಿದ್ದ ವೈದ್ಯರಿಗೆ ಖಡಕ್ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಸಾರ್ವಜನಿಕರು ವೈದ್ಯರು, ಆಸ್ಪತ್ರೆ ನರ್ಸ್‌ಗಳ ನಡೆ ಹಾಗೂ ನಿರ್ಲಕ್ಷ್ಯದ ವಿರುದ್ಧ ಶಾಸಕರಿಗೆ ಸಾಲು ಸಾಲು ದೂರುಗಳನ್ನು ನೀಡಿದರು. ಮುಖ್ಯವಾಗಿ ರಾತ್ರಿ ಅವಧಿಯಲ್ಲಿ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ನರ್ಸ್‌ಗಳು ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು. ಆಗ ಶಾಸಕರು ಆಸ್ಪತ್ರೆ ವೈದ್ಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಾತ್ರಿವೇಳೆ ಸಿಬ್ಬಂದಿ ಗೈರಾಗುವುದನ್ನು ಸಹಿಸುವುದಿಲ್ಲ. ಕರ್ತವ್ಯಲೋಪ ಎಸಗುವ ಸಿಬ್ಬಂದಿ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ನಾನೇ ಖುದ್ದಾಗಿ ರಾತ್ರಿ ವೇಳೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಎಚ್ಚರಿಸಿದರು.
ಇಂಜೆಕ್ಷನ್ ದಾಸ್ತಾನು ಇಡಲು ನಿರ್ದೇಶನ:
ಗ್ರಾಮೀಣ ಜನರಿಗೆ ಅನುಕೂಲ ಆಗುವಂತೆ ಆಸ್ಪತ್ರೆಯಲ್ಲಿ ಕೇವಲ ಬಿಪಿ, ಶುಗರ್ ಔಷಧಿಗಳಷ್ಟೇ ಅಲ್ಲದೇ, ನಾಯಿ ಕಡಿತದ ಇಂಜೆಕ್ಷನ್ ಹಾಗೂ ಹಾವು ಕಡಿತದ ಇಂಜೆಕ್ಷನ್‌ಗಳನ್ನು ಕಡ್ಡಾಯವಾಗಿ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸ್ಥಳದಲ್ಲಿಯೇ ಇದ್ದ ತಾಲೂಕು ಆರೋಗ್ಯಾಧಿಕಾರಿಗಳಿಗೆ (ಟಿಎಚ್‌ಒ) ಶಾಸಕ ಕೆ.ಎಸ್.ಬಸವಂತಪ್ಪ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.- - -
(ಬಾಕ್ಸ್) * ವೈದ್ಯರ ಸಲಹೆ ಇಲ್ಲದೆ ಔಷಧಿ ನಿಲ್ಲಿಸದಂತೆ ಜಾಗೃತಿ ಮೂಡಿಸಿ ತಜ್ಞ ವೈದ್ಯರ ಸಲಹೆಯಂತೆ ಪ್ರತಿದಿನ ಬಿಪಿ ಮತ್ತು ಶುಗರ್ ಔಷಧಿಗಳನ್ನು ಸೇವಿಸುತ್ತಿರುವ ರೈತರು, ಸಾಮಾನ್ಯ ಜನರು ಗ್ರಾಮೀಣ ಪ್ರದೇಶಗಳಲ್ಲಿರುವ ಖಾಸಗಿ ಕ್ಲಿನಿಕ್‌ಗಳಲ್ಲಿ ತಪಾಸಣೆ ವೇಳೆ ‘ಈಗ ಬಿಪಿ, ಶುಗರ್ ನಿಯಂತ್ರಣದಲ್ಲಿದೆ, ಔಷಧಿ ನಿಲ್ಲಿಸಿ’ ಎಂಬ ಸಲಹೆ ಆಧರಿಸಿ ಸ್ವಯಂಪ್ರೇರಿತವಾಗಿ ಔಷಧಿ ನಿಲ್ಲಿಸುತ್ತಾರೆ. ಇಂತಹ ತಪ್ಪು ನಿರ್ಧಾರಗಳಿಂದ ಹಲವರು ಕಿಡ್ನಿ ವೈಫಲ್ಯ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿರುವ ಉದಾಹರಣೆಗಳಿವೆ. ಆದ್ದರಿಂದ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳು ಅಥವಾ ತಜ್ಞ ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಂಡು, ಅವರ ಸಲಹೆಯಂತೆ ಮಾತ್ರ ಬಿಪಿ, ಶುಗರ್ ಔಷಧಿಗಳನ್ನು ಸೇವಿಸುವ ಬಗ್ಗೆ ಜಾಗೃತಿ ಮೂಡಿಸುವಂತೆ ವೈದ್ಯರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.- - -
-6ಕೆಡಿವಿಜಿ32, 33, 34:ಆನಗೋಡು ಆರೋಗ್ಯ ಕೇಂದ್ರಕ್ಕೆ ಶಾಸಕ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರು- ಸಿಬ್ಬಂದಿಗೆ ಅಗತ್ಯ ಸಲಹೆ-ಸೂಚನೆ ನೀಡಿದರು.