ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಕೊರತೆ, ಶಾಸಕ ಜಗದೀಶ ಗುಡಗುಂಟಿ ಬೇಸರ, ನವಜಾತ ಶಿಶುಗಳ ಆರೈಕೆ ಘಟಕ ಉದ್ಘಾಟನೆ, ಬಡವರು ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆ

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಯ ಕೊರತೆ ಉಂಟಾಗಿದೆ. ಶೇ.30 ರಷ್ಟು ಮಾತ್ರ ಔಷಧಲಭ್ಯವಿದ್ದು, ಉಳಿದದ್ದನ್ನು ಅಧಿಕಾರಿಗಳು ಉದ್ರಿ ತರಿಸಿಕೊಂಡು ವಿತರಿಸುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನೂತನವಾಗಿ ಪ್ರಾರಂಭಿಸಲಾದ ನವಜಾತ ಶಿಶುಗಳ ಆರೈಕೆ ಘಟಕ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರಕ್ಕೆ ಔಷಧ ಕೊರತೆ ಇಬ್ಬರು ವೈದ್ಯರು ಹಾಗೂ 9 ಸ್ಟಾಫ್‌ ನರ್ಸ್‌ಗಳ ಕೊರತೆಯ ಕುರಿತು ಗಮನ ಸೆಳೆಯಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಬಡವರು ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳು ಒದಗಿಸಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು. ಜಿಲ್ಲಾಸ್ಪತ್ರೆ ಬಿಟ್ಟರೆ ಅತಿ ಹೆಚ್ಚು ರೋಗಿಗಳು ಬರುವ ಆಸ್ಪತ್ರೆ ಇದಾಗಿದ್ದು, ಪ್ರತಿವರ್ಷ 3 ಸಾವಿರ ಹೆರಿಗೆಗಳಾಗುತ್ತಿವೆ. ಆಸ್ಪತ್ರೆಯ ದಟ್ಟನೆ ಗಮನದಲ್ಲಿಟ್ಟುಕೊಂಡು ಎಂಆರ್‌ಐ, ಸಿಟಿ ಸ್ಕ್ಯಾನ್‌ ಹಾಗೂ ಡಯಾಲಿಸಿಸ್‌ ಯಂತ್ರಗಳ ಪೂರೈಕೆಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ನಗರಕ್ಕೆ ಚಿಕಿತ್ಸೆಗೆಂದು ಬರುವ ರೋಗಿಗಳು ಗಣನೀಯವಾಗಿ ಹೆಚ್ಚಿದ್ದರಿಂದ 300 ಬೆಡ್‌ಗಳ ಹೊಸ ಆಸ್ಪತ್ರೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, 150 ಬೆಡ್‌ಗಳ ಆಸ್ಪತ್ರೆ ಮಂಜೂರಾಗಿದ್ದು, ನಗರದ ಹೊರವಲಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಉದ್ದೇಶವಿದೆ ಎಂದರು. ಟಿಎಚ್‌ಒ ಡಾ.ಜಿ.ಎಸ್‌.ಗಲಗಲಿ, ಡಾ.ಕೃಷ್ಣಾ ಬಣ್ಣದ, ಡಾ.ರಾಕೇಶ ಸೇರಿದಂತೆ ಸಿಬ್ಬಂದಿಗಳಿದ್ದರು.