ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಬಹುತೇಕ ಹೊರಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ. ಸುಮಾರು ೧೮ ಸಿಬ್ಬಂದಿಗಳ ನೇಮಕವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಡೋಣ ಎಂದು ನಗರಸಭಾ ಸದಸ್ಯರು ಅಗ್ರಹಿಸಿದರು.ಪುತ್ತೂರು ನಗರಸಭಾ ಸಮಾನ್ಯ ಸಭೆಯು ಶುಕ್ರವಾರ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಮಂಡನೆಯ ವೇಳೆಯಲ್ಲಿ ಹಿರಿಯ ಸದಸ್ಯ ಕೆ. ಜೀವಂಧರ್ ಜೈನ್ ಮತ್ತು ಭಾಮಿ ಅಶೋಕ್ ಶೆಣೈ ಅವರು ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು. ಇರುವ ಸಿಬ್ಬಂದಿಯೂ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯ ಮಹಮ್ಮದ್ ರಿಯಾಝ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ನಮ್ಮಲ್ಲಿ ದೊಡ್ಡ ಮೈದಾನವಿದೆ ಆದರೆ ಬೆರಳೆಣಿಕೆಯ ಆಟಗಾರರಿದ್ದಾರೆ ಎಂಬಂತಾಗಿದೆ. ಅದರಿಂದಾಗಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಶಾಸಕರಿಗೆ ಒತ್ತಡ ತರುವ ಕೆಲಸ ಮಾಡೋಣ ಎಂದರು. ಇದಕ್ಕೆ ಎಲ್ಲ ಸದಸ್ಯರು ಸಮ್ಮತಿ ಸೂಚಿಸಿದರು. ಗುತ್ತಿಗೆ ಟೆಂಡರ್‌ಗೆ ಆಡಳಿತಾತ್ಮಕ ಅನುಮೋದನೆ: ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿರುವ ೧೮ ವಾಹನ ಚಾಲಕರು ಮತ್ತು ಇಬ್ಬರು ಸ್ಯಾನಿಟರಿ ಸೂಪರ್‌ವೈಸರ್‌ಗಳ ಗುತ್ತಿಗೆ ಅವಧಿಯು ೨೦೨೫ರ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಮುಂದಿನ ಅವಧಿಗೆ ಟೆಂಡರ್ ಕರೆಯಲು ೪೮,೮೧,೦೬೦ ರು. ಅಂದಾಜುಪಟ್ಟಿ ತಯಾರಿಸಲಾಗಿದೆ. ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸಭೆಗೆ ತಿಳಿಸಲಾಯಿತು. ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸ್ಯಾನಿಟರಿ ಸೂಪರ್‌ವೈಸರ್‌ಗಳು ಸರಿಯಾಗಿ ಮನೆ ಭೇಟಿ ಮಾಡುವುದಿಲ್ಲ. ಸಮರ್ಪಕ ಕಸ ವಿಲೇವಾರಿಗೂ ಅವರ ಕಾರಣದಿಂದಾಗಿ ತೊಂದರೆಯಾಗುತ್ತಿದೆ. ಕಸ ವಿಲೇವಾರಿ ವಾಹನದ ಚಾಲಕರಲ್ಲಿ ಸದಸ್ಯರ ಸಹಿಗೆ ಮಾಹಿತಿ ಕಳುಹಿಸುತ್ತಿದ್ದಾರೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಈ ಬಗ್ಗೆ ಸ್ಪಷ್ಟನೆ ನೀಡಿದ ಪೌರಾಯುಕ್ತ ಮಧು ಎಸ್. ಮನೋಹನರ್, ಈ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇದೀಗ ಅವರಿಗೆ ವಾರ್ಡ್‌ಳ ಭೇಟಿ ಕುರಿತು ಡೈರಿ ಬರೆಯುವಂತೆ ಸೂಚಿಸಲಾಗಿದೆ. ಈಗ ಎಲ್ಲವನ್ನೂ ಸರಿಪಡಿಸಲಾಗಿದೆ ಎಂದು ತಿಳಿಸಿದರು. ಬಳಿಕ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ನಗರದ ಬೊಳುವಾರ ವೃತ್ತಕ್ಕೆ ಮತ್ತು ರಸ್ತೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ದಿ. ಡಾ. ಶ್ರೀಧರ ಭಂಡಾರಿ ಅವರ ಹೆಸರನ್ನು ಇಡುವ ಬಗ್ಗೆ ಅವರ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಶಿಷ್ಯವೃಂದ ಯಕ್ಷಕೂಟ ಮನವಿ ಸಲ್ಲಿಸಿದ್ದು, ಶಾಸಕರು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಪತ್ರ ನೀಡಿದ್ದಾರೆಂದು ಸಭೆಗೆ ಮಾಹಿತಿ ನೀಡಲಾಯಿತು. ಈ ಬಗ್ಗೆ ಸಭೆಯ ಅನುಮೋದನೆ ಪಡೆದು ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸುವುದು ಮತ್ತು ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣೆ ಪಡೆದು ಮೇಲಧಿಕಾರಿಗಳಿಗೆ ಅನುಮೋದನೆಗಾಗಿ ಕಳುಹಿಸುವ ಬಗ್ಗೆ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ನಗರದ ವಿವಿಧ ಭಾಗಗಳಾದ ದರ್ಬೆ ಜಂಕ್ಷನ್‌ನಿಂದ ಬೊಳುವಾರು, ಎಪಿಎಂಸಿ ಮುಖ್ಯರಸ್ತೆ, ಆದರ್ಶ ಆಸ್ಪತ್ರೆಯಿಂದ ರೈಲ್ವೇ ಸೇತುವೆ, ವಿವೇಕಾನಂದ ಕಾಲೇಜಿನಿಂದ ಪಡೀಲ್ ಜಂಕ್ಷನ್, ಸಾಲ್ಮರದಿಂದ ಬೆದ್ರಾಳದ ತನಕ ಡಾಂಬರು ರಸ್ತೆಗಳು ಗುಂಡಿ ಬಿದ್ದು ಹದೆಗೆಟ್ಟಿದ್ದು ಈ ರಸ್ತೆಗಳಲ್ಲಿ ತೇಪೆ ಕಾಮಗಾರಿ ನಡೆಸಲು ೯.೨೫ ಲಕ್ಷಕ್ಕೆ ತಯಾರಿಸಲಾದ ಅಂದಾಜು ಪಟ್ಟಿಗೆ ಅಧ್ಯಕ್ಷರು ನೀಡಿರುವ ಘಟನೋತ್ತರ ಮಂಜೂರಾತಿಯಂತೆ ಟೆಂಡರ್‌ಗೆ ಅನುಮೋದನೆ ನೀಡಲಾಯಿತು.ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ., ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು. ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.