ಕೊಪ್ಪಳ ಹೊರವಲಯದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಶಿಕ್ಷಕರ ಅಭಾವದ ಜತೆಗೆ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಯೂ ತೀವ್ರವಾಗಿದ್ದು, ‘ಕೇಂದ್ರೀಯ ವಿದ್ಯಾಲಯ’ ಎಂಬ ಹೆಸರಿಗೆ ತಕ್ಕ ಸೌಲಭ್ಯಗಳಿಲ್ಲದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ಹೊರವಲಯದಲ್ಲಿ ಇರುವ ಕೇಂದ್ರೀಯ ವಿದ್ಯಾಲಯದಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಶಿಕ್ಷಕರ ಅಭಾವದ ಜತೆಗೆ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಯೂ ತೀವ್ರವಾಗಿದ್ದು, ‘ಕೇಂದ್ರೀಯ ವಿದ್ಯಾಲಯ’ ಎಂಬ ಹೆಸರಿಗೆ ತಕ್ಕ ಸೌಲಭ್ಯಗಳಿಲ್ಲದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರಿ ನೌಕರರು, ಸೈನಿಕರು ಹಾಗೂ ಇತರ ಕೇಂದ್ರ ಸೇವೆಯಲ್ಲಿರುವ ಕುಟುಂಬಗಳ ಮಕ್ಕಳಿಗೆ ದೇಶದ ವಿವಿಧೆಡೆ ಒಂದೇ ಮಾದರಿಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರೀಯ ವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಆದರೆ ಕೊಪ್ಪಳದ ವಿದ್ಯಾಲಯದಲ್ಲಿ ಹಲವು ವರ್ಷಗಳಿಂದ ಮೂಲಭೂತ ಸಮಸ್ಯೆಗಳು ಹಾಗೆ ಇವೆ.

610 ಮಕ್ಕಳಿಗೆ 6 ಕಾಯಂ ಶಿಕ್ಷಕರು: 2011ರಲ್ಲಿ ಆರಂಭವಾದ ಈ ವಿದ್ಯಾಲಯಕ್ಕೆ ವಿಶಾಲ ಕಟ್ಟಡ, ಕ್ಯಾಂಪಸ್ ಹಾಗೂ ಮೈದಾನವಿದೆ. ಬಾಲವಾಡಿಯಿಂದ 10ನೇ ತರಗತಿ ವರೆಗೆ ಇದ್ದು, ಒಟ್ಟು 610 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸುಮಾರು 26 ಶಿಕ್ಷಕರ ಅಗತ್ಯವಿದ್ದರೂ, ಸದ್ಯ ಕೇವಲ 6 ಮಂದಿ ಕಾಯಂ ಶಿಕ್ಷಕರು ಮಾತ್ರ ಇದ್ದಾರೆ ಎನ್ನಲಾಗಿದೆ.

ಹೀಗಾಗಿ ಅತಿಥಿ ಶಿಕ್ಷಕರನ್ನೇ ಅವಲಂಬಿಸಬೇಕಾಗಿದೆ. ಸ್ಥಳೀಯವಾಗಿ ನೇಮಕವಾಗುವ ಅತಿಥಿ ಶಿಕ್ಷಕರು ಆಗಾಗ ಬದಲಾಗುತ್ತಿರುವುದರಿಂದ ಬೋಧನಾ ನಿರಂತರತೆಗೂ ಸಮಸ್ಯೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೂ ಪರಿಣಾಮ ಬೀರುವ ಆತಂಕವನ್ನು ಪಾಲಕರು ವ್ಯಕ್ತಪಡಿಸಿದ್ದಾರೆ. ಅಗತ್ಯ ಸಂಖ್ಯೆಯ ಕಾಯಂ ಶಿಕ್ಷಕರನ್ನು ಶೀಘ್ರ ನೇಮಕ ಮಾಡಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

ಬಸ್ ಇಲ್ಲ, ಆಟೋವೇ ಗತಿ: ವಿದ್ಯಾಲಯ ಕೊಪ್ಪಳ ನಗರದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಆಟೋಗಳೇ ಪ್ರಮುಖ ಸಾರಿಗೆ ಸಾಧನವಾಗಿವೆ. ಪ್ರತಿ ತಿಂಗಳು ಮಕ್ಕಳ ಸಾರಿಗೆಗಾಗಿ ಪಾಲಕರು ಸುಮಾರು ₹1,000ರಿಂದ ₹1,500ರ ವರೆಗೆ ಆಟೋ ಬಾಡಿಗೆ ನೀಡಬೇಕಾಗಿದೆ.

ಇದಕ್ಕಿಂತಲೂ ಗಂಭೀರವಾಗಿ, ಶಾಲೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ-67 ದಾಟಬೇಕಾದ ಪರಿಸ್ಥಿತಿ ಇರುವುದರಿಂದ ಮಕ್ಕಳ ಸುರಕ್ಷತೆ ಕುರಿತು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾಲಯದ ಸಂಪರ್ಕ ರಸ್ತೆಯ ಸ್ಥಿತಿಯೂ ಶೋಚನೀಯವಾಗಿದ್ದು, ಮಳೆ ಬಂದಾಗ ಸಂಚಾರ ದುಸ್ತರವಾಗುತ್ತದೆ. ಆಟೋಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ವೇಳೆ ಅಪಾಯ ಎದುರಾಗುವ ಪರಿಸ್ಥಿತಿ ಇದೆ ಎಂದು ಪಾಲಕರು ದೂರಿದ್ದಾರೆ.

ವಿದ್ಯುತ್ ಸಮಸ್ಯೆ: ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾಲಯಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯೂ ಇಲ್ಲ ಎನ್ನಲಾಗಿದೆ. ದಿನಕ್ಕೆ ಸುಮಾರು ಆರು ಗಂಟೆಗಳಷ್ಟೇ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಡಿಜಿಟಲ್ ಬೋಧನಾ ವ್ಯವಸ್ಥೆ ಪರಿಣಾಮಕಾರಿಯಾಗಿ ಬಳಸಲು ತೊಂದರೆಯಾಗುತ್ತಿದೆ.

ಕೇಂದ್ರದ ಶಾಲೆಗೇಕೆ ಈ ಸ್ಥಿತಿ?: ದೇಶದಾದ್ಯಂತ ಒಂದೇ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ ಹೆಸರಾದ ಕೇಂದ್ರೀಯ ವಿದ್ಯಾಲಯವೇ ಕೊಪ್ಪಳದಲ್ಲಿ ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವುದು ಪಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಪ್ಪಳ ನಗರದಿಂದ ಕೇಂದ್ರೀಯ ವಿದ್ಯಾಲಯಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು, ಸಂಪರ್ಕ ರಸ್ತೆಯನ್ನು ತಕ್ಷಣ ದುರಸ್ತಿಪಡಿಸಬೇಕು, ಅಗತ್ಯ ಸಂಖ್ಯೆಯ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಪಾಲಕರ ಆರೋಪ. ರಾಷ್ಟ್ರಮಟ್ಟದ ಶಿಕ್ಷಣ ವ್ಯವಸ್ಥೆಯ ಹೆಸರನ್ನು ಹೊಂದಿರುವ ಶಾಲೆಯಲ್ಲಿ ಸ್ಥಳೀಯ ಮಟ್ಟದ ಮೂಲಭೂತ ಸಮಸ್ಯೆಗಳು ಮುಂದುವರಿಯುತ್ತಿರುವುದು ವಿಪರ್ಯಾಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.