ಸಾರಾಂಶ
ಸುವರ್ಣ ವಿಧಾನ ಮಂಡಲ : ‘ಪೊಲೀಸರ ಮನವೊಲಿಕೆ ಪ್ರಯತ್ನದ ಬಳಿಕವೂ ನಿಷೇಧಾಜ್ಞೆ ಉಲ್ಲಂಘಿಸಿ 10 ಸಾವಿರ ಮಂದಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಸುವರ್ಣಸೌಧ ಕಡೆಗೆ ನುಗ್ಗಲು ಯತ್ನಿಸಿದ್ದರು. ಹೀಗಿದ್ದಾಗ ಲಾಠಿ ಚಾರ್ಜ್ ಮಾಡದೆ ಮುತ್ತು ಕೊಡಬೇಕಾ?’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ತನ್ಮೂಲಕ ಲಾಠಿ ಪ್ರಹಾರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅವರು ಜತೆಗೆ, ಘಟನೆಯನ್ನು ಯಾವುದೇ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಕುರಿತ ಚರ್ಚೆಗೆ ಉಭಯ ಸದನಗಳಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೋರಾಟಗಾರರು ಪೊಲೀಸರ ಮೇಲೆ ಚಪ್ಪಲಿ ಹಾಗೂ ಕಲ್ಲು ತೂರಾಟ ನಡೆಸಿರುವುದಕ್ಕೆ ವಿಡಿಯೋ ಸಾಕ್ಷಿಗಳಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಾತ್ರ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳುವ ಯತ್ನ: ಜಯಮೃತ್ಯುಂಜಯ ಸ್ವಾಮೀಜಿ ಅವರು 5 ಸಾವಿರ ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಎಚ್ಚರಿಕೆ ನೀಡಿದ್ದರು. ಆಗಲೇ ಟ್ರ್ಯಾಕ್ಟರ್‌ಗಳಿಗೆ ಅವಕಾಶವಿಲ್ಲ. ಬದಲಿಗೆ ಟ್ರ್ಯಾಕ್ಸ್ (ತೂಫಾನ್, ಕ್ರ್ಯೂಸರ್) ಮೂಲಕ ಬಂದು ನಿಗದಿತ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದೆವು.
ಈ ನಡುವೆ ಹೋರಾಟಗಾರರು ಧಾರವಾಡ ಕೋರ್ಟ್ ಮೊರೆ ಹೋಗಿ ಸುವರ್ಣಸೌಧ ಮುತ್ತಿಗೆಗೆ ಅವಕಾಶ ನೀಡಿದ್ದರೂ ನ್ಯಾಯಾಲಯ ನಿಗದಿತ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ತಿಳಿಸಿತ್ತು. ನ್ಯಾಯಾಲಯವೂ ಟ್ರ್ಯಾಕ್ಟರ್‌ಗಳಿಗೆ ಅನುಮತಿಸಿರಲಿಲ್ಲ. ಇನ್ನು ಪೊಲೀಸ್ ಆಯುಕ್ತರು ಸುವರ್ಣಸೌಧದಿಂದ 500 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿದ್ದು, ಜಿಲ್ಲಾಧಿಕಾರಿಗಳೂ ನಿಷೇಧಿತ ವಲಯವಾಗಿ ಘೋಷಿಸಿದ್ದರು.
ಜತೆಗೆ ಸರ್ಕಾರದ ಮೂರು ಸಚಿವರು ಪ್ರತಿಭಟನಾ ಸ್ಥಳಕ್ಕೆ ಹೋಗಿ 10 ಮಂದಿ ಪ್ರತಿನಿಧಿಗಳನ್ನು ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಕರೆದಿದ್ದರು. ಇಷ್ಟೆಲ್ಲಾ ಆದರೂ ಸ್ವಾಮೀಜಿ ಕರೆ ಮೇರೆಗೆ ಟ್ರ್ಯಾಕ್ಟರ್‌ಗಳನ್ನು ಬ್ಯಾರಿಕೇಡ್‌ಗಳತ್ತ ನುಗ್ಗಿಸಿ 10 ಸಾವಿರ ಮಂದಿ ಸುವರ್ಣಸೌಧ ಕಡೆಗೆ ಬರಲು ಯತ್ನಿಸಿದರು. ಹತ್ತು ಸಾವಿರ ಜನ ಸುವರ್ಣಸೌಧದತ್ತ ನುಗ್ಗಿದರೆ ಬಿಡಬೇಕಾ? ಲಾಠಿ ಚಾರ್ಜ್ ಮಾಡಬಾರದಾ? ಈ ವೇಳೆ 24 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಅವರು ಮನಷ್ಯರಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲು ತೂರಾಟಕ್ಕೆ ಸಾಕ್ಷಿಯಿದೆ: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದರಿಂದ ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಲಾಗಿದೆ. ಲಾಠಿಯಲ್ಲಿ ಸುಮ್ಮನೆ ಮುಟ್ಟಲಾಗಲ್ಲ, ಹೀಗಾಗಿ ಪೊಲೀಸರು ಲಾಠಿ ಬೀಸಿದ್ದಾರೆ. ಹೋರಾಟಗಾರರು ಮೊದಲು ಕಲ್ಲು, ಚಪ್ಪಲಿ ತೂರಿರುವುದಕ್ಕೆ ನಮ್ಮ ಬಳಿ ವಿಡಿಯೋ ಸಾಕ್ಷಿಗಳಿವೆ. ಅಗತ್ಯ ಸಮಯದಲ್ಲಿ ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಈಗಲೇ ವಿಡಿಯೋಗಳನ್ನು ಬಿಡುಗಡೆ ಮಾಡಿ. ವಿಡಿಯೋಗಳನ್ನು ತಿರುಚಿ ಬಿಡುಗಡೆ ಮಾಡಲು ಹಾಗೆಯೇ ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಡಾ.ಜಿ.ಪರಮೇಶ್ವರ್, ಅಂತಹ ಯಾವುದೇ ಪ್ರಶ್ನೆಯಿಲ್ಲ. ಸಮಯ ಬಂದಾಗ ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಪೊಲೀಸರ ತಪ್ಪೇನೂ ಇಲ್ಲ. ಉದ್ರಿಕ್ತರನ್ನು ಚದುರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದಲೇ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು
ಶ್ರೀಗಳ ಮನವೊಲಿಸದ ಕೈ ನಾಯಕರಿಗೆ ಸಿಎಂ ಚಾಟಿ: ಪಂಚಮಸಾಲಿ ಹೋರಾಟಗಾರರ ಮನವೊಲಿಸುವ ಟಾಸ್ಕ್ ನಿರ್ವಹಿಸದ ಕಾಂಗ್ರೆಸ್‌ನ ಕೆಲ ಪಂಚಮಸಾಲಿ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.5 ಸಾವಿರ ಟ್ರ್ಯಾಕ್ಟರ್‌ಗಳ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರು ಹಲವು ದಿನಗಳ ಮೊದಲೇ ಹೇಳಿದ್ದರು.
ನೀವು ಹಲವು ಬಾರಿ ಹೋಗಿ ಹೋರಾಟಕ್ಕೆ ಬೆಂಬಲ ತಿಳಿಸಿ ಬಂದಿದ್ದೀರಿ. ಆದರೆ ಅವರ ಮನವೊಲಿಸಿ ಹೋರಾಟ ಕೈಬಿಡುವಂತೆ ಮಾಡಿಲ್ಲ ಎಂದು ಕೆಲ ನಾಯಕರ ನಡವಳಿಕೆಗೆ ಮುಖ್ಯಮಂತ್ರಿಯವರು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸುವರ್ಣ ಸೌಧ ಬಳಿ ಪ್ರತಿಭಟನೆ ನಡೆಸುವಾಗಲೂ ಸರ್ಕಾರದ ಪರ ಡಾ। ಎಚ್.ಸಿ.ಮಹದೇವಪ್ಪ, ಡಾ। ಎಂ.ಸಿ.ಸುಧಾಕರ್, ಕೆ.ವೆಂಕಟೇಶ್ ಅವರನ್ನು ಕಳುಹಿಸಲಾಗಿತ್ತು. ಹತ್ತು ಮಂದಿ ಪ್ರತಿನಿಧಿಗಳನ್ನು ನನ್ನ ಬಳಿ ಚರ್ಚೆಗೆ ಕರೆತರುವಂತೆ ತಿಳಿಸಿದ್ದೆ. ಆದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಹಿಂಸಾತ್ಮಕ ಸ್ವರೂಪಕ್ಕೆ ತಿರುಗುವವರೆಗೂ ನೀವು ಅವರಿಗೆ ಮಾಹಿತಿ ನೀಡಿಲ್ಲ. ನೀವು ಹೋರಾಟದ ಭಾಗವಾಗಿದ್ದರೂ ಅವರ ಮನವೊಲಿಸಲು ನಿಮ್ಮಿಂದ ಆಗಿಲ್ಲ ಎಂದಿರುವುದಾಗಿ ತಿಳಿದುಬಂದಿದೆ.
ಪಂಚಮಸಾಲಿ ಮೀಸಲು ಬಗ್ಗೆ ಬಿಜೆಪಿ ನಾಟಕ: ಸಿಎಂಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಕೇಳಿದರೆ 2ಸಿ, 2ಡಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿದ್ದು ಸಂವಿಧಾನ ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶೂನ್ಯವೇಳೆಯಲ್ಲಿ ಉತ್ತರಿಸಿದ ಅವರು, ಯಾರನ್ನು ಸಮಾಧಾನ ಪಡಿಸಲು ಬೊಮ್ಮಾಯಿ ಇದನ್ನು ಮಾಡಿದರೋ ಗೊತ್ತಿಲ್ಲ. ನನ್ನ ಪ್ರಕಾರ ಇದು ರಾಜಕೀಯಕ್ಕಾಗಿ ಮಾಡಿದ ಆದೇಶ. ಮುಸ್ಲಿಂ ಸಮುದಾಯವನ್ನು ನಮ್ಮ ವಿರುದ್ಧ, ಹಿಂದೂಗಳ ವಿರುದ್ಧ ಎತ್ತಿಕಟ್ಟಲು 2ಎ ಪ್ರವರ್ಗದಡಿ ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿ ರದ್ದು ಮಾಡಿ 2ಸಿ, 2ಡಿ ಪ್ರವರ್ಗ ಸೃಷ್ಟಿಮಾಡುವ ನಿರ್ಧಾರ ಮಾಡಿದರು ಎಂದರು.
ಈ ಆದೇಶದ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯದ ಮುಂದಿನ ತೀರ್ಮಾನದವರೆಗೆ ತಮ್ಮ ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸುವುದಿಲ್ಲ. 2002ರ ಮೀಸಲಾತಿಯಲ್ಲಿ ನಾವು ಯಾವುದೇ ಬದಲಾವಣೆ ಮಾಡುವುದಿಲ್ಲ. 2ಎ ಅಡಿ ಬರುವ ಯಾವುದೇ ಸಮುದಾಯವನ್ನು ಕೈಬಿಡುವುದಿಲ್ಲ, ಹೊಸದಾಗಿ ಯಾರನ್ನೂ ಸೇರಿಸುವುದೂ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಈಗ ಪ್ರತಿಪಕ್ಷದಲ್ಲಿ ಕೂತು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡಿ ಎಂದು ನಾಟಕ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಪಂಚಮಸಾಲಿ ಹೋರಾಟ ನಿರಾಣಿಯಿಂದ ಸೃಷ್ಟಿ: ಸಿಎಂ
ಪಂಚಮಸಾಲಿ 2ಎ ಹೋರಾಟ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ಸಿಗದಿದ್ದಕ್ಕಾಗಿ ಹುಟ್ಟಿಕೊಂಡಿದ್ದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಇದಕ್ಕೆ ಹಣಮಂತ ನಿರಾಣಿ, ಡಾ.ಧನಂಜಯ ಸರ್ಜಿ ಮತ್ತಿತರ ಬಿಜೆಪಿ ಸದಸ್ಯರು, ಈ ಹೋರಾಟ 30 ವರ್ಷಗಳ ಹಿಂದಿನಿಂದ ಇದೆ. ಯಾರನ್ನೂ ಮಂತ್ರಿ ಮಾಡಲು ಹುಟ್ಟಿಕೊಂಡಿದ್ದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿಗಳು ಬಹಳ ಬುದ್ಧಿವಂತರು. ಈ ರೀತಿ ದಾರಿತಪ್ಪಿಸಿ ನಮ್ಮನ್ನೇ ಇಬ್ಬಾಗ ಮಾಡುತ್ತಿದ್ದಾರೆ ಎನ್ನುವುದು ನಮ್ಮ ಸದಸ್ಯರ ಹೇಳಿಕೆ. ಹಿಂದೆ ಹಾಗಾಗಿದೆ ಹೀಗಾಗಿದೆ ಎನ್ನುವುದು ಬಿಡಿ. ಈಗ ನೀವು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುತ್ತೀರಾ ಇಲ್ಲವಾ ಅದನ್ನು ಹೇಳಿ ಎಂದು ಆಗ್ರಹಿಸಿದರು.
ಅದಕ್ಕೆ ಮುಖ್ಯಮಂತ್ರಿ ಅವರು, ನಾನು ಮುರುಗೇಶ ನಿರಾಣಿ ಸೇರಿ ಯಾರ ಹೆಸರನ್ನೂ ಹೇಳುವುದಿಲ್ಲ. ಹಾಗಾದರೆ ನೀವೇ ಹೇಳಿ ನಾರಾಯಣಸ್ವಾಮಿ, 2002ರಲ್ಲೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗಗಳನ್ನು ವಿಭಾಗ ಮಾಡಲಾಯಿತಲ್ಲ. ಆವಾಗಲೇ ಯಾಕೆ ಈ ಹೋರಾಟ ಹುಟ್ಟಿಕೊಳ್ಳಲಿಲ್ಲ. ಈ ಹೋರಾಟ ಹುಟ್ಟಿಕೊಂಡಿದ್ದು 2021-22ರಲ್ಲಿ. ಅಲ್ಲಿಯವರೆಗೆ ಯಾಕೆ ಇರಲಿಲ್ಲ ನೀವೇ ಹೇಳಿ ಎಂದು ಪ್ರಶ್ನಿಸಿದರು. ನಾನು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಯಾವ್ಯಾವಾಗ ಏನೇನು ಆರ್ಥಿಕ, ಸಾಮಾಜಿಕ ಚಳವಳಿಗಳು ನಡೆದಿವೆ ಎಂಬುದು ನನಗೂ ಗೊತ್ತು ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.
ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಶೂನ್ಯವೇಳೆ ಮುಗಿದಿದ್ದಾಗಿ ಪ್ರಕಟಿಸಿದರು. ಇದಕ್ಕೆ ಆಕ್ಷೇಪಿಸಿ, ಸಿಎಂ ಉತ್ತರ ಸಮರ್ಪಕವಾಗಿಲ್ಲ ಎಂದು ದೂರಿ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸಭಾಪತಿಗಳು ಕಲಾಪವನ್ನು ಮುಂದೂಡಿದರು.