ಅಪ್ಪಚ್ಚ ಕವಿ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸಬೇಕು: ಎ.ಎಸ್.ಪೊನ್ನಣ್ಣ

| Published : Sep 29 2024, 01:53 AM IST

ಅಪ್ಪಚ್ಚ ಕವಿ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸಬೇಕು: ಎ.ಎಸ್.ಪೊನ್ನಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಸಾಹಿತ್ಯ ಬೆಳವಣಿಗೆಯಲ್ಲಿ ಇಂದಿನ ಮಕ್ಕಳು ಮನಸ್ಸು ಮಾಡಬೇಕಿದೆ. ಅಪ್ಪಚ್ಚ ಕವಿ ಅವರ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಭಾಷಿಕರೆಲ್ಲರೂ ಒಂದುಗೂಡಬೇಕಿದೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಬೆಳವಣಿಗೆಯಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಶ್ರಮ ಮಹತ್ತರವಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಚೇರಂಬಾಣೆಯ ಬೇಂಗ್ ನಾಡು ಕೊಡವ ಸಮಾಜ ಸಹಕಾರದಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಂಡ ಕವಿ ಅವರ 157 ನೇ ಜನ್ಮದಿನದ ಪ್ರಯುಕ್ತ ಚೇರಂಬಾಣೆಯಲ್ಲಿ ಶನಿವಾರ ನಡೆದ ‘ಕೊಡವ ಸಾಹಿತ್ಯ ನಾಳ್’ ಕಾರ್ಯಕ್ರಮದಲ್ಲಿ ಅಪ್ಪಚ್ಚ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಕೊಡವ ಸಾಹಿತ್ಯ ಬೆಳವಣಿಗೆಯಲ್ಲಿ ಇಂದಿನ ಮಕ್ಕಳು ಮನಸ್ಸು ಮಾಡಬೇಕಿದೆ. ಅಪ್ಪಚ್ಚ ಕವಿ ಅವರ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಭಾಷಿಕರೆಲ್ಲರೂ ಒಂದುಗೂಡಬೇಕಿದೆ ಎಂದು ಕರೆ ನೀಡಿದರು.

ಕೊಡವ ಭಾಷಿಕರೆಲ್ಲರೂ ಒಟ್ಟುಗೂಡಿದಾಗ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳು, ಸಾಹಿತ್ಯ ಉಳಿಸಿ ಬೆಳೆಸಲು ಸಾಧ್ಯ, ಆ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿದರೆ ಮಾತ್ರ ಕೊಡವ ಭಾಷಿಕ ಜನಾಂಗ ಉಳಿಯಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಕೊಡವ ಸಂಸ್ಕೃತಿ, ಸಾಹಿತ್ಯ, ಕಲೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕೊಡಗಿನ ಪರಿಸರಕ್ಕೆ ಪೂರಕವಾಗಿರುವಂತೆ ಕೊಡವ ಸಂಸ್ಕೃತಿ ಮತ್ತು ಕಲೆಯನ್ನು ಎಲ್ಲೆಡೆಯೂ ಪಸರಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಜಿಲ್ಲೆಯ ಎಲ್ಲೆಡೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ.ಅಪ್ಪಣ್ಣ ಹಾಗೂ ಅಕಾಡೆಮಿ ಮಾಜಿ ಸದಸ್ಯರಾದ ಚೀರಮ್ಮನ ವಾಣಿ ಚಂಗುಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬೆಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಟ್ಟಮಡ ಮಿಲನ್ ಮುತ್ತಣ್ಣ, ಚೇರಂಬಾಣೆ ಬೆಂಗ್ ನಾಡು ಕೊಡವ ಸಮಾಜದ ಅಧ್ಯಕ್ಷರಾದ ಬಾಚರಣಿಯಂಡ ದಿನೇಶ್ ಗಣಪತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪುತ್ತರೀರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಇತರರು ಇದ್ದರು.

ವ್ಯಾಲಿಡ್ಯೂ ತಂಡದವರಿಂದ ಬೊಳಕಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ರಾಜರಾಜೇಶ್ವರಿ ಶಾಲಾ ಮಕ್ಕಳಿಂದ ಕೋಲಾಟ್ ಪ್ರದರ್ಶನ ನಡೆಯಿತು.

ತೇಲಪಂಡ ಲಕ್ಷ್ಮಿ ಮತ್ತು ಕುಚ್ಚಟಿರ ಕುಮಾರಿ ಅವರು ಪ್ರಾರ್ಥಿಸಿದರು. ನಳಿನಿ ಮತ್ತು ಪ್ರಮೀಳಾ ಅವರು ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಚೇರಂಬಾಣೆ ಪಟ್ಟಣದ ಮುಖ್ಯರಸ್ತೆಯಿಂದ ಕೊಡವ ಸಮಾಜದ ಸಭಾಂಗಣದ ವರೆಗೆ ಕೊಡವ ಸಾಂಸ್ಕೃತಿಕ ಕಲರವ ಕಂಡುಬಂದಿತು. ಸಾಂಪ್ರದಾಯಿಕ ದಿರಿಸಿನಲ್ಲಿ ಮೆರವಣಿಗೆಯಲ್ಲಿ ಬೆಂಗ್ ನಾಡಿನ ಕೊಡವ ಭಾಷಿಕ ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.