ಇಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ: ಕೆ. ಸುರೇಂದ್ರ

| Published : Oct 16 2024, 12:35 AM IST / Updated: Oct 16 2024, 12:36 AM IST

ಇಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ: ಕೆ. ಸುರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಹಲಗೂರು ಗ್ರಾಮ ಪಂಚಾಯ್ತಿ ಪಿಡಿಒ ಸಿ.ರುದ್ರಯ್ಯ ವಿರುದ್ಧ ಹಲವಾರು ಗಂಭೀರ ಆರೋಪಗಳಿವೆ. ಅವರು ಪಿಡಿಒ ಅಗಿ ಬಂದ ನಂತರ ಹಲವಾರು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ್ದಾರೆ. ಭೂಗಳ್ಳರಿಂದ ಲಂಚ ಪಡೆದು ರಾಜಕಾಲುವೆಗಳು, ಸರ್ಕಾರಿ ಜಮೀನುಗಳನ್ನು ಭೂಗಳ್ಳರಿಗೆ ಖಾತೆ ಮಾಡಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕು ಹಲಗೂರು ಗ್ರಾಮ ಪಂಚಾಯ್ತಿ ಪಿಡಿಒ ಸಿ.ರುದ್ರಯ್ಯ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮವನ್ನು ಖಂಡಿಸಿ ಬುಧವಾರ (ಅ.೧೬) ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಹಲಗೂರು ಗ್ರಾಪಂ ಸದಸ್ಯ ಕೆ.ಸುರೇಂದ್ರ ತಿಳಿಸಿದರು.

ಹಲಗೂರು ಗ್ರಾಮ ಪಂಚಾಯ್ತಿ ಪಿಡಿಒ ಸಿ.ರುದ್ರಯ್ಯ ವಿರುದ್ಧ ಹಲವಾರು ಗಂಭೀರ ಆರೋಪಗಳಿವೆ. ಅವರು ಪಿಡಿಒ ಅಗಿ ಬಂದ ನಂತರ ಹಲವಾರು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ್ದಾರೆ. ಭೂಗಳ್ಳರಿಂದ ಲಂಚ ಪಡೆದು ರಾಜಕಾಲುವೆಗಳು, ಸರ್ಕಾರಿ ಜಮೀನುಗಳನ್ನು ಭೂಗಳ್ಳರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿವಿಧ ಇಲಾಖೆಯ ಸರ್ಕಾರದ ಯೋಜನೆಗಳ ಅವ್ಯವಹಾರದಲ್ಲಿ ಸಿ.ರುದ್ರಯ್ಯ ಭಾಗಿಯಾಗಿದ್ದಾರೆ. ಇವರ ಭ್ರಷ್ಟಾಚಾರ, ಅವ್ಯವಹಾರ, ಹಣ ದುರುಪಯೋಗದ ಬಗ್ಗೆ ಸಾಕ್ಷ್ಯ, ದಾಖಲೆಗಳ ಸಹಿತ ಮುಖ್ಯಮಂತ್ರಿಗಳು, ಸಚಿವರು, ಶಾಸಕರಿಗೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ಸಾಲು ಸಾಲು ದೂರು ಕೊಟ್ಟಿದ್ದೇವೆ. ಆದರೂ ಇಂತಹ ಭ್ರಷ್ಟ ಅಧಿಕಾರಿ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಭ್ರಷ್ಟಾಚಾರ ನಡೆಸಿದ್ದರೂ ಸಹ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವುದನ್ನು ಬಿಟ್ಟು ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಆತನಿಗೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದಾಗಿ ಸಿ.ರುದ್ರಯ್ಯ ಮತ್ತಷ್ಟು ಅವ್ಯವಹಾರ ನಡೆಸಲು ಪುಷ್ಟಿ ನೀಡಿದಂತಾಗಿದೆ ಎಂದು ದೂರಿದರು.

ಗ್ರಾಪಂನಲ್ಲಿ ಹಣ ದುರುಪಯೋಗದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ೧೧೫ ಪುಟಗಳ ದಾಖಲೆಗಳನ್ನು ಜಿಪಂ ಸಿಇಒಗೆ ದೂರು ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡ ವಿಚಾರಣೆ ನಡೆಸಿ ವರದಿ ನೀಡಿ ೫೫.೪೫ ಲಕ್ಷ ರು. ಕಂದಾಯ ವಸೂಲಾತಿಯಲ್ಲಿ ೪೩.೯೦ ಲಕ್ಷ ರು. ಮಾತ್ರ ಬ್ಯಾಂಕ್‌ಗೆ ಜಮಾ ಮಾಡಿ ೧೧.೫೪ ಲಕ್ಷ ದುರುಪಯೋಗ ಮಾಡಿಕೊಂಡಿರುವುದರ ಬಗ್ಗೆ ವರದಿ ನೀಡಿದ್ದರೂ ಸಿಇಒ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸರ್ಕಾರಿ ದಾಖಲೆಗಳನ್ನು ತಿದ್ದಿ ರಾಜಕಾಲುವೆ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ. ಒತ್ತುವರಿ ಮಾಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ದಾಖಲೆಗಳ ಸಹಿತ ನೀಡಲಾಗಿದೆ. ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿ ತಹಸೀಲ್ದಾರ್‌ಗೆ ಸೂಚಿಸಿದ್ದರ ಮೇರೆಗೆ ತನಿಖೆ ನಡೆಸಿ ರಾಜಕಾಲುವೆ ಮೇಲೆ ನಿರ್ಮಿಸಲಾಗಿದ್ದ ೧೧ ನಿವೇಶನಗಳನ್ನು ರದ್ದುಪಡಿಸಿ, ಪಿಡಿಒ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ವಂಚಿಸಿರುವುದರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಮಳವಳ್ಳಿ ತಾಪಂ ಇಒಗೆ ನಿರ್ದೇಶನ ನೀಡಲಾಗಿತ್ತು. ಅವರೂ ಸಹ ತನಿಖೆ ನಡೆಸಿ ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಭೀಮಾನದಿ ನಿರ್ಬಂಧಿತ ವಲಯದಲ್ಲಿ ಪಿಡಿಒ ಸಿ.ರುದ್ರಯ್ಯ ಕಾನೂನು ಬಾಹಿರವಾಗಿ ಹಣದ ಆಮಿಷಕ್ಕೆ ಒಳಗಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಜಿಲ್ಲಾಧಿಕಾರಿ ಅನ್ಯಕ್ರಾಂತ ಆದೇಶದಲ್ಲಿರುವ ಷರತ್ತುಗಳನ್ನು ಉಲ್ಲಂಘಿಸಿ ಬಫರ್‌ರೆನ್ ಸೇರಿಸಿಕೊಂಡು ಅಕ್ರಮವಾಗಿ ಖಾತೆ ಮಾಡಿ ಇ-ಸ್ವತ್ತುಗಳನ್ನು ಗಣಕೀಕರಣದಲ್ಲಿ ಇಂಡೀಕರಣ ಮಾಡಿ ಕಾಫಿಗಳನ್ನು ತೆಗೆದಿರುತ್ತಾರೆ. ಇದರ ಈ ಬಗ್ಗೆ ತಹಸೀಲ್ದಾರ್‌ರವರು ತನಿಖೆ ನಡೆಸಿ ರುದ್ರಯ್ಯನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ರೀತಿ ಹಲವು ಪ್ರಕರಣಗಳಲ್ಲಿ ಪಿಡಿಒ ರುದ್ರಯ್ಯ ಭಾಗಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಎಂಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಆಸ್ಪದ ನೀಡದಿದ್ದಲ್ಲಿ ಸಿಎಂ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ, ಮುಖಂಡರಾದ ಕುಮಾರಸ್ವಾಮಿ, ನಾಗೇಂದ್ರ, ಅಣ್ಣಯ್ಯ ಗೋಷ್ಠಿಯಲ್ಲಿದ್ದರು.