ಪ್ರಗತಿ ತೋರಿಸಿ, ಸಭೆಯಲ್ಲಿ ಕಥೆ ಹೇಳಬೇಡಿ

| Published : Nov 07 2024, 11:57 PM IST

ಸಾರಾಂಶ

ಅಧಿಕಾರಕ್ಕೆ ಬಂದು ಒಂದು ಮುಕ್ಕಾಲು ವರ್ಷವಾಗಿದೆ. ರಸ್ತೆ, ಚರಂಡಿ, ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಹಣವನ್ನೂ ನೀಡಿದ್ದಾಗಿದೆ. ಆದರೆ, ಕ್ಷೇತ್ರದಲ್ಲಿ ಕೆಲಸದ ಯಾವ ಪ್ರಗತಿಯೂ ಇಲ್ಲ. ಜನ ನಮ್ಮ ಕುರಿತು ಏನು ಮಾತನಾಡುತ್ತಾರೆ? ಮೊದಲು ಕಾಮಗಾರಿ ಪ್ರಾರಂಭಿಸಿ, ಪ್ರಗತಿ ತೋರಿಸಿ, ಸಭೆಯಲ್ಲಿ ಬರೀ ಕಥೆ ಹೇಳಬೇಡಿ ಎಂದು ನಗರ ಸಭೆಯ ಕಾರ್ಯವೈಖರಿ ಕುರಿತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಾಗರ ಅಧಿಕಾರಕ್ಕೆ ಬಂದು ಒಂದು ಮುಕ್ಕಾಲು ವರ್ಷವಾಗಿದೆ. ರಸ್ತೆ, ಚರಂಡಿ, ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಹಣವನ್ನೂ ನೀಡಿದ್ದಾಗಿದೆ. ಆದರೆ, ಕ್ಷೇತ್ರದಲ್ಲಿ ಕೆಲಸದ ಯಾವ ಪ್ರಗತಿಯೂ ಇಲ್ಲ. ಜನ ನಮ್ಮ ಕುರಿತು ಏನು ಮಾತನಾಡುತ್ತಾರೆ? ಮೊದಲು ಕಾಮಗಾರಿ ಪ್ರಾರಂಭಿಸಿ, ಪ್ರಗತಿ ತೋರಿಸಿ, ಸಭೆಯಲ್ಲಿ ಬರೀ ಕಥೆ ಹೇಳಬೇಡಿ ಎಂದು ನಗರ ಸಭೆಯ ಕಾರ್ಯವೈಖರಿ ಕುರಿತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವರ್ಷವಾದರೂ ರಸ್ತೆ ಕಾಮಗಾರಿಗಳನ್ನು ಆರಂಭಿಸದಿರುವ ಕುರಿತು ತರಾಟೆ ತೆಗೆದುಕೊಂಡರು. ಹಣವಿದ್ದರೂ ಕೆಲಸವಾಗಿಲ್ಲ. ಇದು ನಿಮ್ಮ ತಪ್ಪು, ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸಿ, ಟೆಂಡರ್ ವಜಾ ಮಾಡಿ, ಕೆಲಸ ಮಾಡುವಂತವರಿಗೆ ಗುತ್ತಿಗೆ ಕೊಡಿ. ಅಧಿಕಾರಿಗಳ

ನಿರ್ಲಕ್ಷ್ಯದಿಂದಾಗಿ ಜಾಲತಾಣಗಳಲ್ಲಿ ರಸ್ತೆ ಗುಂಡಿ, ಕಸದ ರಾಶಿ ತೋರಿಸಿ ನಮ್ಮನ್ನು ಹೊಣೆ ಮಾಡುವುದು ದೈನಂದಿನ ಕಾರ್ಯವಾಗಿದೆ. ಕೂಡಲೆ ಅಧಿಕಾರಿಗಳು ನಗರದ ರಸ್ತೆ ದುರಸ್ತಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಪಟ್ಟಣದ ಮಾರ್ಕೆಟ್ ರಸ್ತೆ ಅಗಲೀಕಣ ನಿಯಮದ ರೀತಿಯಲ್ಲಿಯೇ ಆಗಲಿದೆ. ಜನರ ಅನುಕೂಲಕ್ಕಾಗಿ ಅಲ್ಲಿಯ ನಿವಾಸಿಗಳಿಗೆ ಯಾವುದೇ ಒತ್ತಡ ಹೇರದೆ ಮನವೊಲಿಸುವ ಪ್ರಯತ್ನ ಮಾಡಿದ್ದೆವು. ಸರ್ವರ ಸಮ್ಮತಿ ಪಡೆದು ಊರಿನ ಒಳಿತಿಗಾಗಿ ಕಾಮಗಾರಿ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅದಕ್ಕೆ ಅವಕಾಶ ನೀಡದಿರುವುದರಿಂದ ಕಾನೂನಿನ ಅಡಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಶೀಘ್ರದಲ್ಲಿ ನಡೆಯಲಿದೆ ಎಂದು ಹೇಳಿದರು.ಅರಣ್ಯ ಇಲಾಖೆಗೆ ಹಲವು ಬಾರಿ ಸೂಚನೆ ನೀಡಿದ್ದರೂ, ಹಲವು ವರ್ಷದ ಹಿಂದಿನಿಂದಲೇ ಒತ್ತುವರಿ ಮಾಡಿಕೊಂಡಿರುವ ಬಡವರಿಗೆ ಮತ್ತೆ ಮತ್ತೆ ನೋಟೀಸ್ ನೀಡಿ, ತೊಂದರೆ ಕೊಡಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಆದರೆ ಯಾವುದೇ ಕಾರಣಕ್ಕೂ ಇಲಾಖೆಯವರು ಹೊಸ ಒತ್ತುವರಿಗೆ ಅವಕಾಶ ನೀಡಬೇಡಿ. ಮೊದಲಿನಿಂದಲೇ ವಾಸವಿರುವವರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸರಕಾರದ ಇತರ ಇಲಾಖೆಗಳಿಗೆ, ರಸ್ತೆ, ವಿದ್ಯುತ್ ಕಾಮಗಾರಿಗೂ ನೀವು ಅವಕಾಶ ಕೊಡುವುದಿಲ್ಲ ಎಂದಾದರೆ, ಅರಣ್ಯ ಇಲಾಖೆಯವರು ಬರಿ ಅರಣ್ಯದಲ್ಲಿಯೇ ಓಡಾಡಿಕೊಂಡಿರಬೇಕು. ನಮ್ಮ ಡಾಂಬರು ರಸ್ತೆಗಳಲ್ಲಿ ನೀವ್ಯಾಕೆ ತಿರುಗಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ಮುಖ್ಯವಾಗಿ ಪ್ರಸ್ತುತಕ್ಕೆ ಅಗತ್ಯವಿರುವ ಕಾಮಗಾರಿಗಳಿಗೆ ತೊಂದರೆ ಕೊಡುವುದು ಸರಿ ಅಲ್ಲ. ತಾಲೂಕಿನ ಅರಳಗೋಡು ಭಾಗದಲ್ಲಿ ಹುಲಿಯಿಂದ ಆಗುತ್ತಿರುವ ತೊಂದರೆ, ತಕ್ಷಣ ಬಗೆಹರಿಸಲು ಇಲಾಖೆಯವರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.ನಾಡಕಲಸಿಯಲ್ಲಿ ಗೋಶಾಲೆ ನಿರ್ಮಿಸಲು ಮೀಸಲಿಟ್ಟು, ಜಾಗ ಒತ್ತುವರಿಯಾಗಿರುವ ಬಗ್ಗೆ ದೂರುಗಳಿವೆ. ತಕ್ಷಣ ಅದನ್ನು ತೆರವುಗೊಳಿಸಿ, ಕಾಂಪೌಂಡ್ ನಿರ್ಮಿಸಿ. ಅಡಕೆ ಕೊಯ್ಲು ಪ್ರಾರಂಭವಾಗುತ್ತಿದ್ದು, ಕಳ್ಳತನದ ಬಗ್ಗೆ ನಿಗಾವಹಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ. ಪೊಲೀಸರು ಇದರ ಬಗ್ಗೆ ಗಮನ ಹರಿಸಬೇಕು. ಮುಖ್ಯವಾಗಿ ನಗರವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಿಳಿಸಿದರು.ಉಪವಿಭಾಗಾಧಿಕಾರಿ ಆರ್. ಯತೀಶ್, ಇಒ ಗುರುಕೃಷ್ಣ ಶಣೈ, ಗ್ಯಾರಂಟಿ ಅನುಷ್ಠಾನದ ತಾಲೂಕು ಅಧ್ಯಕ್ಷ ಬಿ.ಆರ್. ಜಯಂತ್, ಆಯುಕ್ತ ಎಚ್.ಕೆ. ನಾಗಪ್ಪ, ಡಿವೈಎಸ್‍ಪಿ ಗೋಪಾಲಕೃಷ್ಣ ನಾಯಕ್, ಉಪ ತಹಸೀಲ್ದಾರ್ ಚಂದ್ರಶೇಖರ್, ಸೇರಿದಂತೆ ತಾಲೂಕಿನ ಹಲವು ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿದ್ದರು.