ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿ: ಸಿ.ಎಸ್.ಪುಟ್ಟರಾಜು

| Published : Jan 29 2025, 01:32 AM IST

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿ: ಸಿ.ಎಸ್.ಪುಟ್ಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ಚರ್ಚಿಸುವುದು ಬೇಡ, ಚುನಾವಣೆ ಮುಗಿದ ಒಂದೇ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಇದೀಗ ಎದುರಾಗಿರುವ ಮನ್‌ಮುಲ್, ಪಿಎಲ್‌ಡಿ ಬ್ಯಾಂಕ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಎಲ್ಲರೂ ಒಗ್ಗಟ್ಟಿನಿಂದ ವೈಮನಸ್ಸು ಬಿಟ್ಟು ಗೆಲ್ಲಿಸುವ ಮೂಲಕ ಪಕ್ಷ ಬಲಪಡಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸ್ಥಳೀಯ ಸಂಸ್ಥೆ ಚುನಾವಣೆಗಳಾದ ಮನ್‌ಮುಲ್, ಪಿಎಲ್‌ಡಿ ಬ್ಯಾಂಕ್ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್‌ನ ಋತ್ವಿ ಕನ್ವೆಷನ್ ಹಾಲ್‌ನಲ್ಲಿ ಪಿಎಲ್‌ಡಿ ಬ್ಯಾಂಕ್, ಮನ್‌ಮುಲ್ ಚುನಾವಣೆ ಸಂಬಂಧ ನಡೆದ ಜೆಡಿಎಸ್-ಬಿಜೆಪಿ ಎನ್‌ಡಿಎ ಮೈತ್ರಿಕೂಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ಚರ್ಚಿಸುವುದು ಬೇಡ, ಚುನಾವಣೆ ಮುಗಿದ ಒಂದೇ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಇದೀಗ ಎದುರಾಗಿರುವ ಮನ್‌ಮುಲ್, ಪಿಎಲ್‌ಡಿ ಬ್ಯಾಂಕ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಎಲ್ಲರೂ ಒಗ್ಗಟ್ಟಿನಿಂದ ವೈಮನಸ್ಸು ಬಿಟ್ಟು ಗೆಲ್ಲಿಸುವ ಮೂಲಕ ಪಕ್ಷ ಬಲಪಡಿಸುವ ಕೆಲಸ ಮಾಡಬೇಕು. ೨೫ ವರ್ಷದಿಂದಲೂ ಪಿಎಲ್‌ಡಿ ಬ್ಯಾಂಕ್ ಜೆಡಿಎಸ್ ಅಧಿಕಾರದಲ್ಲಿಯೇ ಇದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಮುಖಂಡರು, ಅಭ್ಯರ್ಥಿಗಳು ಕುಳಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದರು.

ಮನ್‌ಮಲ್ ಚುನಾವಣೆಯಲ್ಲಿ ಎದುರು ಅಭ್ಯರ್ಥಿಯ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ. ಪಾಪ-ಪುಣ್ಯದ ಲೆಕ್ಕಾಚಾರ ಎಲ್ಲವೂ ದೇವರ ಬಳಿ ಇದೆ, ಅಂತಿಮವಾಗಿ ದೇವರು, ಮತದಾರರು ತೀರ್ಮಾನಿಸುತ್ತಾರೆ. ರಾಜ್ಯ ಸರ್ಕಾರದಿಂದ ಕನಿಷ್ಠ ಪಕ್ಷ ಕ್ಷೇತ್ರದಲ್ಲಿ ಗುಂಡಿ ಮುಚ್ಚಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಚಿನಕುರಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶವೇ ಮುಂದಿನ ಚುನಾವಣೆಗಳ ದಿಕ್ಸೂಚಿಯಾಗಲಿವೆ ಎಂದರು.

ಜೆಡಿಎಸ್ ಮುಖಂಡ ರಾಧಾಕೃಷ್ಣ ಮಾತನಾಡಿ, ಮನ್‌ಮುಲ್ ಚುನಾವಣೆಯ ಎದುರಾಳಿ ಅಭ್ಯರ್ಥಿ ಒಬ್ಬ ನಟೋರಿಯಸ್ ಇದ್ದ ಹಾಗೆ, ನಾವೆ ಆ ನಟೋರಿಯಸ್‌ನನ್ನು ಬೆಳೆಸಿಬಿಟ್ಟಂತಾಗಿದೆ, ಕಳೆದ ಚುನಾವಣೆಯಲ್ಲಿ ನಮ್ಮಲ್ಲಿಯೇ ಇದ್ದು ಗೆದ್ದು ಇದೀಗ ಬೇರೆ ಪಕ್ಷಕ್ಕೆ ಹೋಗಿದ್ದಾನೆ. ಅಂತಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿದರೆ ನಮಗೆ ಅವಮಾನ. ಮನೆಗಳಲ್ಲಿ ಹೆಣ್ಣುಮಕ್ಕಳ ಕಾಲುಮಟ್ಟುವ ಮೂಲಕ ಅವರ ಗಂಡಂದಿರ ಮನವೊಲಿಸುವ ಕೆಲಸ ಮಾಡುತ್ತಿದ್ದಾನೆ. ಇಂತಹ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಕಾಂಗ್ರೆಸ್-ರೈತಸಂಘ ಬೆಂಬಲಿತ ಅಭ್ಯರ್ಥಿ ಕೆ.ರಾಮಚಂದ್ರು ಹೆಸರು ಹೇಳದೆಯೇ ಆಕ್ರೋಶ ಹೊರಹಾಕಿದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಮನ್‌ಮುಲ್ ನಿರ್ದೇಶಕರಾದವರು ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು. ಆದರೆ, ಹಿಂದಿನ ನಿರ್ದೇಶಕರಾದ ಕೆ.ರಾಮಚಂದ್ರು ಒಂದು ಕಡೆ ಕುಳಿತುಕೊಂಡು ಡೇರಿಗಳ ಕಾರ್ಯದರ್ಶಿಗಳಿಂದ ವಸೂಲಿ ಮಾಡಿದ್ದಾರೆ, ಹೀಗೆ ಡೇರಿಗಳಿಂದ ವಸೂಲಿ ಮಾಡಿದರೆ ಯಾವ ಸಂಘಗಳ ಉದ್ಧಾರ ಆಗುತ್ತವೆ. ಅಲ್ಲದೇ, ನಿರ್ದೇಶಕನಾದ ಬಳಿಕ ಹತ್ತಾರು ಕೋಟಿ ಹಣವನ್ನು ಸಂಪಾಧಿಸಿದ್ದರೂ ನನ್ನ ಬಳಿ ಹಣವಿಲ್ಲ ಎಂಬಂತೆ ನಾಟಕವಾಡುತ್ತಿದ್ದಾನೆ. ಮತದಾರರು ಯೋಚನೆ ಮಾಡಬೇಕು, ವಸೂಲಿಮಾಡುವ ನಿರ್ದೇಶಕರು ಬೇಕೋ? ಸಂಘದ ಅಭಿವೃದ್ದಿಗೆ ಶ್ರಮಿಸ ನಿರ್ದೇಶಕರು ಬೇಕೋ ಎನ್ನುವುದನ್ನು ಮತದಾರು ಚಿಂತನೆ ಮಾಡಬೇಕು ಎಂದರು.

ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ಸ್ಪರ್ಧಿಸುವ ಆಕಾಂಕ್ಷಿತ ಅಭ್ಯರ್ಥಿಗಳು ನಾಯಕರ ಸಮ್ಮುಖದಲ್ಲಿ ಹೆಸರನ್ನು ಒಬ್ಬೊಬ್ಬರಾಗಿಯೇ ನೋಂದಾಯಿಸಿಕೊಂಡರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಸಿ.ಯಶವಂತ್‌ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳನವೀನ್‌ಕುಮಾರ್, ತಾಲೂಕು ಅಧ್ಯಕ್ಷ ಧನಂಜಯ್, ಜಕ್ಕನಹಳ್ಳಿ ಚಂದ್ರಶೇಖರ್ ಮಾತನಾಡಿದರು.

ಸಭೆಯಲ್ಲಿ ಕ್ಷೇತ್ರದ ಉಸ್ತುವಾರಿ ಮದ್ದೂರು ಸ್ವಾಮಿ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಅಶೋಕ್, ಮುಖಂಡರಾದ ಆನಂದ್, ಕ್ಯಾತನಹಳ್ಳಿಗವೀಗೌಡ, ಬಿಜೆಪಿ ಮುಖಂಡ ಮಂಜುನಾಥ್, ಬನ್ನಂಗಾಡಿ ಶ್ರೀನಿವಾಸ್, ನಂಜೇಗೌಡ ಇತರರಿದ್ದರು.