ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.ಮುಂಜಾನೆ ೪ ರಿಂದ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು, ಕೋಲಾರ, ಹೊಸಕೋಟೆ, ಆನೇಕಲ್, ಮಾಲೂರು, ಕೆಜಿಎಫ್ ಅಲ್ಲದೆ ನೆರೆಯ ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಮತ್ತು ಆಂಧ್ರ ಪ್ರದೇಶದಿಂದಲೂ ಹೆಚ್ಚಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಹೊಸಕೋಟೆ ತಾಲೂಕಿನ ವಾಗಟ ಗ್ರಾಪಂನ ಸದಸ್ಯರಾದ ಮಾಕನಹಳ್ಳಿ ಮಧು ಮತ್ತು ಅವರ ಕುಟುಂಬದವರಿಂದ ದೇವಸ್ಥಾನದ ಎಲ್ಲಾ ಸಿಬ್ಬಂದಿಗೆ ಹೊಸ ಬಟ್ಟೆ ವಿತರಣೆ ಮಾಡಿದರು.ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮಾಲೂರು ನಗರದ ದಿ. ಡಿ.ಟಿ. ಪುಟ್ಟಪ್ಪ ಅವರ ಕುಟುಂಬದವರು ಪುಳಿಯೋಗರೆ ವಿತರಿಸಿದರು. ಚಿಕ್ಕ ತಿರುಪತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ವಿ. ಮಂಜುನಾಥ್ ಅವರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು, ಕಲ್ಕೆರೆ ಬಾಬು ಅವರು ಭಕ್ತಾದಿಗಳಿಗೆ ಲಡ್ಡು ಪ್ರಸಾದ ವಿತರಿಸಿದರು.
ಗಣ್ಯರಿಂದ ದೈವ ದರ್ಶನ:ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಶಾಸಕ ಕೆ. ವೈ. ನಂಜೇಗೌಡ, ಬಾಗೇಪಲ್ಲಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ, ಮಾಜಿ ಶಾಸಕ ಕೆ. ಎಸ್. ಮಂಜುನಾಥ್ ಗೌಡ, ಮಾಜಿ ಜಿಪಂ ಸದಸ್ಯರಾದ ರಾಮೇಗೌಡ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಮೂರ್ತಿ, ಗ್ರಾಪಂ ಅಧ್ಯಕ್ಷ ಜಿ.ವಿ.ಮಂಜುನಾಥ್, ತಾಪಂ ಮಾಜಿ ಸದಸ್ಯ ನಾಗೇಶ್ ಸೇರಿ ವಿವಿಧ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.