ದೇವಾಲಯದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತಾದಿಗಳು ಸಹ ಬೆಟ್ಟದ ಕೆಳಗೆ ಅನ್ನಪ್ರಸಾದವನ್ನು ನೀಡುತ್ತಿದ್ದುದು ಕಂಡುಬಂತು. ಭಕ್ತರು ಜಾತ್ರೆಯ ರೀತಿಯಲ್ಲಿ ದೇವಾಲಯಕ್ಕೆ ಹರಿದುಬರುತ್ತಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಎರಡನೇ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ತಾಲೂಕಿನ ಕೊಮ್ಮೇರಹಳ್ಳಿಯಲ್ಲಿರುವ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರದಿಂದಲೇ ದೇವಾಲಯದ ಆವರಣವನ್ನು ತಳಿರು ತೋರಣ, ಹೂಗಳಿಂದ ಶೃಂಗರಿಸಲಾಗಿತ್ತು. ದೇವರಿಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಏಕಶಿಲೆಯ ಶ್ರೀ ಕಂಬದ ನರಸಿಂಹಸ್ವಾಮಿ ದೇವರಿಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು.
ದೇವಾಲಯದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತಾದಿಗಳು ಸಹ ಬೆಟ್ಟದ ಕೆಳಗೆ ಅನ್ನಪ್ರಸಾದವನ್ನು ನೀಡುತ್ತಿದ್ದುದು ಕಂಡುಬಂತು. ಭಕ್ತರು ಜಾತ್ರೆಯ ರೀತಿಯಲ್ಲಿ ದೇವಾಲಯಕ್ಕೆ ಹರಿದುಬರುತ್ತಿದ್ದರು.ನಗರದ ಪ್ರಮುಖ ದೇವಾಲಯಗಳಲ್ಲೊಂದಾದ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯ, ಶ್ರೀ ಶ್ರೀನಿವಾಸ ದೇವಾಲಯ, ಹೊಸಹಳ್ಳಿ ಬಡಾವಣೆಯ ಶ್ರೀ ಶ್ರೀನಿವಾಸ ದೇವಾಲಯ, ಭೋವಿ ಕಾಲೋನಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ, ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಆಂಜನೇಯ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.
ಮದ್ದೂರು, ಮಳವಳ್ಳಿ, ಕೆ.ಆರ್. ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನ ವಿಷ್ಣು ದೇವಾಲಯಗಳಲ್ಲಿ ಎರಡನೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಮೇಲುಕೋಟೆ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆಯ ಭೂವರಾಹನಾಥ ಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಿ ಪೂಜೆ ಸಲ್ಲಿಸಿದರು.