ಸಾರಾಂಶ
ವೀರಶೈವ ಯುವ ವೇದಿಕೆ ವತಿಯಿಂದ ನಡೆದ ಸಾಮೂಹಿಕ ರುದ್ರಾಭಿಷೇಕ ಹಾಗೂ ಧರ್ಮಸಭೆಯನ್ನು ದುಗ್ಗಿ ತಪೋಕ್ಷೇತ್ರದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಸಾಗರ
ಶ್ರಾವಣ ಮಾಸ ಅತ್ಯಂತ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದ್ದು, ಧರ್ಮಕಾರ್ಯಗಳಿಗೆ ಈ ಮಾಸ ಅತ್ಯಂತ ಯೋಗ್ಯವಾಗಿದೆ ಎಂದು ಸುಕ್ಷೇತ್ರ ದುಗ್ಗಿ ತಪೋಕ್ಷೇತ್ರದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ಇಲ್ಲಿನ ವೀರಶೈವ ಯುವ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ರುದ್ರಾಭಿಷೇಕ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ವಿಶ್ವಕ್ಕೆ ಶಾಂತಿಯನ್ನು ಬಯಸಿ, ಮಾನವ ಧರ್ಮಕ್ಕೆ ಒಳಿತಾಗಲಿ ಎಂದು ಬಯಸಿದ್ದು ವೀರಶೈವ ಧರ್ಮವಾಗಿದೆ. ಸರ್ವ ಸಮುದಾಯದ ಹಿತವನ್ನು ವೀರಶೈವ ಸಮಾಜ ಬಯಸುತ್ತದೆ ಎಂದರು.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ರುದ್ರಾಭಿಷೇಕವನ್ನು ವೇದಿಕೆ ನಡೆಸಿಕೊಂಡು ಬರುತ್ತಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಹೇಳಿದರು.ಬೆಳಿಗ್ಗೆ ೮ಗಂಟೆಯಿಂದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯದಲ್ಲಿ ಸಾಮೂಹಿಕ ರುದ್ರಾಭಿಷೇಕ ಕಾರ್ಯಕ್ರಮ ನಡೆಯಿತು. ಸಮಾಜ ಬಾಂಧವರು ಲಿಂಗಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವೇದಿಕೆ ಅಧ್ಯಕ್ಷ ವಿರೂಪಾಕ್ಷ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ರುದ್ರಮುನಿ ಸಜ್ಜನ್, ಪ್ರವೀಣ್ ಕೆ.ವಿ., ಬಿ.ಎ.ಇಂದೂಧರ ಗೌಡ, ಬಸವರಾಜ ಗುಂಡಾಲಿ, ಜಿ.ಎಸ್. ಹಿರೇಮಠ, ಎಸ್.ಸಿ.ಗಂಗಾಧರ ಗೌಡ, ಮಧು ಮಲ್ಲಿಕಾರ್ಜುನ, ಎಚ್.ಎನ್.ಚಂದ್ರಶೇಖರ್, ಮೈತ್ರಿ ಪಾಟೀಲ್, ಬಿ.ಎಚ್.ಲಿಂಗರಾಜ್ ಇನ್ನಿತರರು ಹಾಜರಿದ್ದರು.