ಮಂಗಳೂರು : ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿರುವ ಕು. ಶ್ರಾವ್ಯ ಬಿ.ಎಸ್ ಅ.23 ರಂದು ಮಂಗಳೂರಿನ ಪುರಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ರಂಗಪ್ರವೇಶಗೈಯ್ಯಲಿದ್ದಾರೆ.

ಸಂಜೆ 5.30 ಕ್ಕೆ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮದ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಗುರು ಉಳ್ಳಾಲ ಮೋಹನ್ ಕುಮಾರ್‌ ಮತ್ತು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅವರು ಭಾಗವಹಿಸಲಿದ್ದಾರೆ.ತನ್ನ ಎರಡನೇ ವಯಸ್ಸಿನಲ್ಲಿಯೇ ಭರತನಾಟ್ಯ ಅಭ್ಯಾಸದಲ್ಲಿ ತೊಡಗಿದ ಶ್ರಾವ್ಯ ವಿದ್ವಾನ್ ಯು.ಕೆ. ಪ್ರವೀಣ್ , ಗುರು ಡಾ. ಶ್ರೀವಿದ್ಯಾ ಅವರ ಸೌಮ್ಯ ಹಾಗೂ ಸಮರ್ಥ ಮಾರ್ಗದರ್ಶನದಲ್ಲಿ ಕಲಾಯಾನಗೈದರು. ಸಂಗೀತ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಶ್ರಾವ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸುವ ಪ್ರೀ-ವಿದ್ವತ್ ಪರೀಕ್ಷೆಯಲ್ಲಿ ಹಾಗೂ ಕೆಎಸ್‌ಇಇಬಿ ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಉಷಾ ಪ್ರವೀಣ್ ಇವರಿಗೆ ಮಾರ್ಗದಶನ ನೀಡಿದ್ದಾರೆ.

ಮೈಸೂರು ಅರಮನೆಯಂತಹ ಪ್ರತಿಷ್ಠಿತ ವೇದಿಕೆ, ಮೌಂಟ್ ಅಬುವಿನ ಗ್ಲೋಬಲ್ ಸಮಿಟ್, ನೃತ್ಯ ಸ್ಪಟಿಕ, ಆಳ್ವಾಸ್ ಜಾಂಬೂರಿ ಉತ್ಸವ, ಮಡಿಕೇರಿ ದಸರಾ, ಜೆ.ಸಿ. ಸಪ್ತಾಹ ಹಾಗೂ ಅಬ್ಬಕ್ಕೋತ್ಸವ ಸೇರಿದಂತೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಪಾಲ್ಗೊಂಡು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಪೃಥ್ವಿ, ಶೇಡ್ಸ್ ಆಫ್ ಶ್ಯಾಮ, ಶ್ರೀ ರಾಮಾಯಣ ದರ್ಶನಂ, ಕರ್ನಾಟಕ ಸಂಭ್ರಮ ಮತ್ತು ಶ್ರೀನಿವಾಸ ಕಲ್ಯಾಣ ಮುಂತಾದ ಮನಮುಟ್ಟುವ ನೃತ್ಯ ರೂಪಕಗಳಲ್ಲಿಯೂ ಅವಳು ಭಾಗವಹಿಸಿದ್ದಾರೆ. ಶ್ರಾವ್ಯ ಕಾಸರಗೋಡು ತಾಲೂಕಿನ ಉಪ್ಪಳ ಬಳಿಯ ಬಜೆ ಕುಟುಂಬದ ಶ್ರೀಕೃಷ್ಣ ಮಯ್ಯ ಹಾಗೂ ಬಬಿತಾ ಕೃಷ್ಣ ಮಯ್ಯ ಅವರ ಸುಪುತ್ರಿ ಶ್ರಾವ್ಯ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಕಾಡೆಮಿ ಬಾಲ ಗೌರವ ಪ್ರಶಸ್ತಿ, ತಿರುವನಂತಪುರಂನಲ್ಲಿ ನಡೆದ ಅನಂತಪುರಿ ಇಂಟರ್‌ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ನೃತ್ಯ ಗುಣಶ್ರೀ, ಬೆಂಗಳೂರಿನಲ್ಲಿ ನಡೆದ ಮಣಿಕರ್ಣಿಕಾ ನೃತ್ಯ ಉತ್ಸವದಲ್ಲಿ ನೃತ್ಯ ಮಾಣಿಕ್ಯ ಸಮ್ಮಾನ್, ಹೊಸದಿಲ್ಲಿಯ ವಿಶಾರದ ಕಲಾ ಉತ್ಸವದಲ್ಲಿ ನೃತ್ಯಶ್ರೀ, ಕತಾರ್‌ನ ದೋಹಾದಲ್ಲಿ ನಾದಂ ಸಿಲ್ಕ್ಸ್ ಡೆವಲಪ್‌ಮೆಂಟ್ ಸೆಂಟರ್‌ನಿಂದ ನಾಟ್ಯ ಬಾಲ ಕಲಾಮಣಿ ಪುರಸ್ಕಾರ, ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್‌ಡ್ಯಾನ್ಸ್ ಅಕಾಡೆಮಿಯಿಂದ ನಾಟ್ಯ ನಿನಾದ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರಿನ ನಂದಗೋಕುಲ ಡ್ಯಾನ್ಸ್ ಸ್ಕೂಲ್‌ನಿಂದ ನಾಟ್ಯ ಕಲಾಮಣಿ ಪ್ರಶಸ್ತಿ, ಬೆಂಗಳೂರಿನ ಝೇಂಕಾರದಿಂದ ಶ್ರೀ ಕಲಾಪೂರ್ಣ ಪ್ರಶಸ್ತಿ, ಅಸ್ಸಾಮಿನ ವಿಶ್ವವಿಖ್ಯಾತ ಕಾಮಾಖ್ಯ ಉತ್ಸವದಲ್ಲಿ ಅತ್ಯುತ್ತಮ ಪ್ರಶಸ್ತಿ, ಒಡಿಶಾದ ರಿದಮ್ ಕಲ್ಚರಲ್ ಸೆಂಟರ್‌ನಲ್ಲಿ ಭರತನಾಟ್ಯದ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ, ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.