ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೂರು
ಹೋಬಳಿಯ ನವಿಲೆ ಬೋವಿ ಕಾಲೋನಿ ಗ್ರಾಮದಲ್ಲಿ ಶ್ರೀ ದೊಡ್ಡಮ್ಮ ಚೌಡೇಶ್ವರಿ ದೇವಾಲಯದ ಮುಂಭಾಗ ದೇವಿಯವರ ಉಯ್ಯಾಲೆ ಕಂಬವನ್ನು ಶಾಸಕ ಸಿಎನ್ ಬಾಲಕೃಷ್ಣ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.ಗ್ರಾಮದ ಗೌರಮ್ಮ ನಂಜುಂಡಪ್ಪ ಹಾಗೂ ಸಮಾಜ ಸೇವಕ ಪಿ ನಾಗೇಶ್ ಅವರು ನಿರ್ಮಾಣ ಮಾಡಿಸಿದ್ದ ಶ್ರೀ ದೊಡ್ಡಮ್ಮ ಚೌಡೇಶ್ವರಿ ದೇವಿಯವರ ಉಯ್ಯಾಲೆ ಕಂಬವನ್ನು ಶಾಸಕ ಸಿಎನ್ ಬಾಲಕೃಷ್ಣರವರು ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮಸ್ಥರ ಉದಾರ ನೆರವಿನಿಂದ ಶ್ರೀ ದೊಡ್ಡಮ್ಮ ಚೌಡೇಶ್ವರಿ ದೇವಿಯವರ ಉಯ್ಯಾಲೆ ಕಂಬವನ್ನುಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಧಾರ್ಮಿಕ ಕಾರ್ಯ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ದಾನಿಗಳು ಉಯ್ಯಾಲೆ ಕಂಬವನ್ನು ನಿರ್ಮಾಣ ಮಾಡಿದ್ದಾರೆ ಎಂದರು.ಇದರಿಂದ ಗ್ರಾಮದಲ್ಲಿ ಜಾತ್ರೆ ಹಬ್ಬದ ಸಂದರ್ಭಗಳಲ್ಲಿ ದೇವರಿಗೆ ಉಯ್ಯಾಲೆ ನಡೆಸಲು ಸಹಕಾರಿಯಾಗುತ್ತದೆ. ನವಿಲೆ ಗ್ರಾಮದಿಂದ ಬೋವಿ ಕಾಲೋನಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಅನುದಾನ ಒದಗಿಸುವುದಾಗಿ ತಿಳಿಸಿದರು.
ಈಗಾಗಲೇ ನವಿಲೆ ಗೇಟ್‌ನಿಂದ ಭೋವಿ ಕಾಲೋನಿವರೆಗೆ ಸುಮಾರು 1 ಕಿಲೋಮೀಟರ್ ರಸ್ತೆಯನ್ನು ಕಳೆದ 1 ವರ್ಷಗಳ ಹಿಂದೆಯೇ ಅಭಿವೃದ್ಧಿಪಡಿಸಲಾಗಿದೆ.ನವಿಲೆ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ನವಿಲೆ ನಾಗೇಶ್ವರ ಸ್ವಾಮಿ ದೇವಾಲಯವಿದ್ದು, ರಾಜ್ಯದ ನಾನಾ ಭಾಗಗಳಿಂದ ಸರ್ಪದೋಷದ ಪರಿಹಾರಕ್ಕಾಗಿ ಸಾವಿರಾರು ಭಕ್ತರು ಪ್ರತಿದಿನ ದೇವಾಲಯಕ್ಕೆ ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ದೇವಾಲಯ ಸಮೀಪ ಶೌಚಾಲಯ ಸ್ಥಾನದ ಮನೆ ಸೇರಿದಂತೆ ತಿಪಟೂರು ಹಾಗೂ ಚನ್ನರಾಯಪಟ್ಟಣ ಮಾರ್ಗದಿಂದ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ, ಮುಂಬರುವ ದಿನಗಳಲ್ಲಿ ಪವಿತ್ರ ಪುಣ್ಯಕ್ಷೇತ್ರವನ್ನಾಗಿ ಮಾಡಲು ಹೆಚ್ಚು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮದ ವತಿಯಿಂದ ಉಯ್ಯಾಲೆ ಕಂಬದ ದಾನಿಗಳನ್ನು ಹಾಗೂ ಶಾಸಕ ಸಿ ಎನ್ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎನ್ ಪರಮೇಶ್, ಕೃಷಿ ಪತ್ತಿನ ಅಧ್ಯಕ್ಷ ಕುಮಾರು, ದಾನಿಗಳಾದ ಗೌರಮ್ಮ ನಂಜುಂಡೇಗೌಡ, ಪಿ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯ ದೀಪು, ಮುಖಂಡರಾದ ಹೊಸೂರು ಚಂದ್ರಪ್ಪ, ಇಟ್ಟಿಗೆ ನಾಗರಾಜ್, ಜಯದೇವಪ್ಪ, ಎನ್ ಕೆ ನಾಗಪ್ಪ, ರಾಜು, ಪಾಪಣ್ಣ, ಲೋಕೇಶ್, ಪಂಚಾಯಿತಿ ಕಾರ್ಯದರ್ಶಿ ಮಲ್ಲೇಶ್, ಸೇರಿದಂತೆ ಭೋವಿ ಕಾಲೋನಿ ಗ್ರಾಮಸ್ಥರು ಹಾಜರಿದ್ದರು.