ದೊಡ್ಡಬಳ್ಳಾಪುರದ ವಿವಿಧೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ವೈಭವ

| Published : Aug 17 2025, 01:34 AM IST

ದೊಡ್ಡಬಳ್ಳಾಪುರದ ವಿವಿಧೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಶ್ರೀಕೃಷ್ಣನ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.

ದೊಡ್ಡಬಳ್ಳಾಪುರ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಶ್ರೀಕೃಷ್ಣನ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.

ಸನಾತನ ಸಂಸ್ಕೃತಿಯ ಪಾರಂಪರಿಕ ವ್ಯಕ್ತಿತ್ವ ಎನಿಸಿರುವ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಅನೇಕ ಮಾದರಿಗಳು ಇಲ್ಲಿನ ಮನೆಗಳಲ್ಲಿ ಕಂಡುಬಂದವು. ಮನೆಮನೆಗಳಲ್ಲಿ ಬಾಲಕೃಷ್ಣನ ಆರಾಧನೆ ನಡೆಯಿತು. ಮುರಾರಿಯ ನಾಮಸ್ಮರಣೆ, ವಿವಿಧ ವಿನೋದಾವಳಿಗಳ ಪ್ರಾತಕ್ಷಿಕೆಯೊಂದಿಗೆ ಮಕ್ಕಳಿಗೆ ಶ್ರೀಕೃಷ್ಣ-ರಾಧೆಯರ ವೇಷಭೂಷಣಗಳನ್ನು ಹಾಕಿ ಸಡಗರದಿಂದ ಜನ್ಮಾಷ್ಟಮಿಯನ್ನು ಆಚರಿಸಿದರು. ತಾಲೂಕಿನ ಅನೇಕ ಹೋಬಳಿ ಕೇಂದ್ರಗಳು ಮತ್ತು ಗ್ರಾಮಗಳಲ್ಲಿ ಕೂಡ ಕೃಷ್ಣಾಷ್ಟಮಿಯ ವೈಭವ ಗಮನ ಸೆಳೆಯಿತು.

ತಾಲೂಕು ಕಚೇರಿಯಲ್ಲಿ ಕಾರ್ಯಕ್ರಮ:

ದೊಡ್ಡಬಳ್ಳಾಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ನೇತೃತ್ವದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ತಾಲೂಕು ಕಚೇರಿಯಲ್ಲಿ ಆಚರಿಸಲಾಯಿತು. ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಪಿಸಲಾಯಿತು. ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗಿಯಾದರು.

ಶ್ರೀಕೃಷ್ಣ ದೇಗುಲದಲ್ಲಿ ಸಂಭ್ರಮ:

ತಾಲೂಕು ಯಾದವ(ಗೊಲ್ಲ) ಸಂಘದ ನೇತೃತ್ವದಲ್ಲಿ ಇಲ್ಲಿನ ನಾಗರಕೆರೆಯ ಸಮೀಪ ಇರುವ ಶ್ರೀಕೃಷ್ಣ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ದೇವಾಲಯದ ಶ್ರೀಕೃಷ್ಣ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮಾತನಾಡಿದ ಗಣ್ಯರು, ಭಾರತೀಯ ಸನಾತನ ಸಂಸ್ಕೃತಿಯ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಂದಾಗಿರುವ ಶ್ರೀಕೃಷ್ಣನ ಚಿಂತನೆಗಳು ಇಂದಿನ ಎಲ್ಲ ವಲಯಗಳಿಗೆ ಮಾದರಿಯಾಗಬೇಕು. ಯಾದವ ಸಮುದಾಯದ ಸಂಘಟನೆಗೆ ಈ ಬಗೆಯ ಕಾರ್ಯಕ್ರಮಗಳು ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯ:

ಇಲ್ಲಿನ ಬಸ್ನಿಲ್ದಾಣದ ಸಮೀಪ ಇರುವ ಇತಿಹಾಸ ಪ್ರಸಿದ್ದ ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದೇವಾಲಯದ ವೇಣುಗೋಪಾಲ ಸ್ವಾಮಿ, ವೆಂಕಟೇಶ್ವರ ಸ್ವಾಮಿ ಹಾಗೂ ಪದ್ಮಾವತಿ ದೇವಿಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಜನೆ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.

ಸಂಜೆ ಕೃಷ್ಣನ ಬಾಲಲೀಲಾ ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಕೃಷ್ಣ, ರಾಧೆಯರ ವೇಷಧಾರಿಗಳಾಗಿ ಪಾಲ್ಗೊಂಡರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತೂಬಗೆರೆ ವೇಣುಗೋಪಾಲ ದೇಗುಲ:

ತಾಲೂಕಿನ ತೂಬಗೆರೆ ಹೋಬಳಿಯ ಯದ್ದಲಹಳ್ಳಿ ಸಮೀಪವಿರುವ ಶ್ರೀರಂಗವನದ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.

ಗಣ್ಯರು ಮಾತನಾಡಿ , ಜನ್ಮಾಷ್ಟಮಿ ಪ್ರಯುಕ್ತ, ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲ ಸ್ವಾಮಿಗೆ ಕ್ಷೀರಾಭಿಷೇಕ, ಅಷ್ಟಗಂಧ ಅರ್ಚನೆ, ವಿಷ್ಣು ಸಹಸ್ರನಾಮ ಪೂರ್ವಕ ತುಳಸಿ ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ವಿವರಿಸಿದರು.

ಹಲವು ದೇಗುಲಗಳಲ್ಲಿ ಸಂಭ್ರಮ:

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಕುಚ್ಚಪ್ಪನಪೇಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ವಿಠೋಬ ದೇವಾಲಯ, ವೆಂಕಟರಮಣಸ್ವಾಮಿ ದೇವಾಲಯ, ಪಾಂಡುರಂಗಸ್ವಾಮಿ ದೇವಾಲಯ, ಶ್ರೀರಾಮ ದೇಗುಲ ಸೇರಿದಂತೆ ಹಲವೆಡೆ ಸಂಭ್ರಮ ಕಂಡು ಬಂತು.

ಶಾಲೆಗಳಲ್ಲೂ ಕೃಷ್ಣ ಜನ್ಮಾಷ್ಠಮಿ:

ಇಲ್ಲಿನ ವಿವಿಧ ಶಾಲೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಏರ್ಪಡಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ನೂರಾರು ಮಕ್ಕಳು ರಾಧೆ, ಕೃಷ್ಣ ಮತ್ತು ರುಕ್ಮಿಣಿಯರ ವೇಷ ಧರಿಸಿ ಸಂಭ್ರಮಿಸಿದರು. ಶ್ರೀ ದೇವರಾಜ್ ಅರಸ್‌ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಪುಟಾಣಿ ಮಕ್ಕಳ ವೇಷಭೂಷಣ ಪ್ರದರ್ಶನ ನಡೆಯಿತು.

16ಕೆಡಿಬಿಪಿ2-

ದೊಡ್ಡಬಳ್ಳಾಪುರದ ಶ್ರೀದೇವರಾಜ್‌ ಅರಸ್‌ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಪುಟಾಣಿ ಮಕ್ಕಳು ರಾಧೆ-ಕೃಷ್ಣ ವೇಷದಲ್ಲಿ ಗಮನ ಸೆಳೆದರು.

--

16ಕೆಡಿಬಿಪಿ3- ದೊಡ್ಡಬಳ್ಳಾಪುರದ ಗಂಗಸಂದ್ರದ 6 ತಿಂಗಳ ಪುಟಾಣಿ ಮಗು ಕೃಷ್ಣ ವೇಷಧಾರಿ.

--

16ಕೆಡಿಬಿಪಿ4- ದೊಡ್ಡಬಳ್ಳಾಪುರದ ಕಿಲ್ಲೆ ವೇಣುಗೋಪಾಲ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.

--

16ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ವೇಣುಗೋಪಾಲಸ್ವಾಮಿಗೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷಾಲಂಕಾರ.