ಸಾರಾಂಶ
ರಾಮನವಮಿ ನಿಮಿತ್ತ ಶ್ರೀಮಠದಲ್ಲಿ ಪೀಠಾಧಿಪತಿಗಳು ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಮತ್ತು ಇತರ ಸಂಸ್ಥಾನದ ವಿಗ್ರಹಗಳಿಗೆ ಮಹಾ ಅಭಿಷೇಕವನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀರಾಮ ನವಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ನೇತೃತ್ವದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ರಾಮನವಮಿ ನಿಮಿತ್ತ ಶ್ರೀಮಠದಲ್ಲಿ ಪೀಠಾಧಿಪತಿಗಳು ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಮತ್ತು ಇತರ ಸಂಸ್ಥಾನದ ವಿಗ್ರಹಗಳಿಗೆ ಮಹಾ ಅಭಿಷೇಕ, ಮೂಲರಾಮದೇವರು, ದಿಗ್ವಿಜಯ ರಾಮದೇವರು ಮತ್ತು ಜಯರಾಮ ದೇವರ ಮೂರ್ತಿಗಳಿಗೆ ಗಂಥ ಲೇಪನ ಮಾಡಿ ಸಂಸ್ಥಾನ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ, ವಿವಿಧ ಪ್ರದೇಶಗಳಿಂದ ಬಂದ ಭಕ್ತರು ಇದ್ದರು.ರಾಯರ ದರ್ಶನ ಪಡೆದ ಪಲಿಮಾರು ಶ್ರೀಗಳು
ಶ್ರೀರಾಮನವಮಿ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಉಡುಪಿಯ ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥರು ಹಾಗೂ ಉತ್ತರಾಧಿಕಾರಿ ವಿದ್ಯಾ ರಾಜೇಶ್ವರ ತೀರ್ಥರು ಭೇಟಿ ನೀಡಿದರು.ಶ್ರೀಮಠಕ್ಕೆ ಆಗಮಿಸಿದ ಉಭಯ ಶ್ರೀಗಳನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಮೊದಲು ಗ್ರಾಮದೇವತೆ ಮಂಚಾಲಮ್ಮರಿಗೆ ಪೂಜೆಯನ್ನು ನೆರವೇರಿಸಿದ ಪಲಿಮಾರು ಶ್ರೀಗಳು ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನಕ್ಕೆ ವಿಶೇಷ ಮಂಗಳಾರತಿ ಸೇವೆಗೈದು ದರ್ಶನ ಪಡೆದರು.
ಇದೇ ವೇಳೆ ಉಡುಪಿಯ ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥರು ಹಾಗೂ ಉತ್ತರಾಧಿಕಾರಿ ವಿದ್ಯಾ ರಾಜೇಶ್ವರ ತೀರ್ಥರಿಗೆ ಶ್ರೀಮಠ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಫಲ, ವಸ್ತ್ರ ಪ್ರಸಾದ ನೀಡಿ ಸನ್ಮಾನಿಸಿ ಗೌರವಿಸಿದರು.