ವೈಭವಯುತವಾಗಿ ಸಾಗಿದ ಶ್ರೀ ಶಾರದಾಂಬಾ ಮಹಾರಥೋತ್ಸವ,
KannadaprabhaNewsNetwork | Published : Oct 26 2023, 01:00 AM IST
ವೈಭವಯುತವಾಗಿ ಸಾಗಿದ ಶ್ರೀ ಶಾರದಾಂಬಾ ಮಹಾರಥೋತ್ಸವ,
ಸಾರಾಂಶ
ವೈಭವಯುತವಾಗಿ ಸಾಗಿದ ಶ್ರೀ ಶಾರದಾಂಬಾ ಮಹಾರಥೋತ್ಸವ
ಶರನ್ನವರಾತ್ರಿ ಉತ್ಸವಕ್ಕೆ ಸಾಕ್ಷಿಯಾದ ಜನಸ್ತೋಮ । ಮೆರವಣಿಗೆಗೆ ಸಾಥ್ ನೀಡಿದ ವಿವಿಧ ಸ್ತಬ್ದಚಿತ್ರಗಳು । ಕನ್ನಡಪ್ರಭ ವಾರ್ತೆ ಶೃಂಗೇರಿ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತಶ್ರೇಣಿಗಳ ತಪ್ಪಲು, ವಿಭಾಂಡಕ ಮುನಿಗಳ ತಪೋಭೂಮಿ, ತುಂಗೆಯ ತಟದಲ್ಲಿರುವ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ಶರನ್ನವರಾತ್ರಿ ಉತ್ಸವದ ಹನ್ನೊಂದನೇ ದಿನವಾದ ಬುಧವಾರ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ನವರಾತ್ರಿಯ ಹಗಲು ದರ್ಬಾರ್ ವೈಭವಯುತವಾಗಿ ನಡೆಯಿತು. ನಾಡಿನ ಮೂಲೆಮೂಲೆಗಳಿಂದ, ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಬೆಳಿಗ್ಗೆ ಶ್ರೀಮಠದ ಮುಂಭಾಗ ರಥದಲ್ಲಿ ಶಾರದಾಂಬೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ರಾಜಬೀದಿಯಲ್ಲಿ ಶಾರದಾಂಬಾ ಮಹಾರಥೋತ್ಸವ ಜರುಗಿತು. ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವೂ ನಡೆಯಿತು. ಶ್ರೀ ಮಠದ ಸಕಲ ರಾಜಲಾಂಛನಗಳೊಂದಿಗೆ ಛತ್ರಿ ಛಾಮರ, ವಾದ್ಯಮೇಳ, ನೂರಾರು ವಿಪ್ರೋತ್ತಮರ ವೇದಘೋಷ ಗಳೊಂದಿಗೆ ಹೊರಟ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜೈಕಾರಗಳು, ಧಾರ್ಮಿಕ ಘೋಷಗಳು ಮುಗಿಲುಮುಟ್ಟಿದವು. ರಥೋತ್ಸವದಲ್ಲಿ ಶ್ರೀಮಠದ ಆನೆಗಳಾದ ಲಕ್ಷ್ಮಿ, ಜಯಲಕ್ಷ್ಮಿಅಶ್ವಗಳಾದ ಅರ್ಜುನ, ಅಭಿಮನ್ಯು ಹಾಗೂ ತಟ್ಟಿರಾಯ ವಿಶೇಷ ಮೆರಗು ನೀಡಿದವು. ರಥ, ಅಡ್ಡಪಲ್ಲಕ್ಕಿ ಸಾಗುವ ಮೊದಲು ಸಾಂಸ್ಕೃತಿಕ ಕಲಾತಂಡಗಳು, ವಿವಿಧ ಸ್ತಬ್ದಚಿತ್ರಗಳು, ಜಾನಪದ ನೃತ್ಯ ತಂಡಗಳು, ಮರಗಾಲು ಕುಣಿತ, ಡೊಳ್ಳುಕುಣಿತ, ಮಕ್ಕಳ ನೃತ್ಯ, ಪರಿಸರ ಸೊಬಗು, ಮಲೆನಾಡಿನ ಜಾನಪದ ಸಾಂಸ್ಕೃತಿಕ ಸೊಬಗು ಸಾರುವ ವಿವಿಧ ಸ್ತಬ್ದಚತ್ರಗಳು, ಧಾರ್ಮಿಕ ಸ್ತಬ್ದಚಿತ್ರಗಳು, ವಿವಿಧ ವೇಷ ಭೂಷಣಗಳು, ಭಜನಾ ತಂಡಗಳು ಜನರ ಮನಸೂರೆ ಗೊಳಿಸುವಂತಿದ್ದವು. ರಥಸಾಗುವ ರಸ್ತೆಯನ್ನು ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತು ಶ್ರೀ ಶಾರದಾಂಬೆ ದರ್ಶನ ಪಡೆದು ಭಕ್ತಿ ಭಾವದಿಂದ ನಮಿಸುತ್ತಿದ್ದರು. ರಥೋತ್ಸವದ ನಂತರ ಬಲಿಪೀಠದಲ್ಲಿ ಶ್ರೀ ಶಾರದಾಮೂರ್ತಿಯನ್ನು ತಲೆಯ ಮೇಲೆ ಹೊತ್ತು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಬುಧವಾರ ಹಗಲು ದರ್ಬಾರ್ ನಡೆಯುವ ಮೂಲಕ ನವರಾತ್ರಿ ದರ್ಬಾರ್ ಕೊನೆಗೊಂಡಿತು. ನವರಾತ್ರಿಯ 9 ದಿನಗಳ ಕಾಲ ಪೀಠದ ಅಧಿದೇವತೆ ಶಾರದೆ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ರಾಜರಾಜೇಶ್ವರಿ, ವೀಣಾಪಾಣಿ, ಮೋಹಿನಿ, ಚಾಮುಂಡೇಶ್ವರಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಿ ಮಹಾ ರಥೋತ್ಸವದ ದಿನ ಗಜಲಕ್ಷ್ಮಿಅಲಂಕಾರದಲ್ಲಿ ರಥಾ ರೋಹಣ ಮಾಡಿ ರಾಜಬೀದಿಯ ಉತ್ಸವದಲ್ಲಿ ಸಾಗುತ್ತಿದ್ದ ದೃಶ್ಯ ಮನಮೋಕವಾಗಿತ್ತು. ಮುಂದಿನ ಹುಣ್ಣಿಮೆಯಂದು ಶಾರದೆಗೆ ಮತ್ತೆ ಮಹಾಭಿಷೇಕ, ತುಂಗಾನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಇದರೊಂದಿಗೆ ನವರಾತ್ರಿಯ ಎಲ್ಲಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. 25 ಶ್ರೀ ಚಿತ್ರ 1--ವೈಭವಯುತ ಶ್ರೀ ಶಾರದಾಂಬಾ ಮಹಾರಥೋತ್ಸವ 25 ಶ್ರೀ ಚಿತ್ರ 2-ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ