ಮಹಿಳೆಯರ ಪ್ರಗತಿಗಾಗಿ ಸ್ತ್ರೀಶಕ್ತಿ ಸಂಘ ಸಹಕಾರಿ

| Published : Oct 25 2024, 12:50 AM IST

ಮಹಿಳೆಯರ ಪ್ರಗತಿಗಾಗಿ ಸ್ತ್ರೀಶಕ್ತಿ ಸಂಘ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತನ್ನ ಸ್ಥಾನಮಾನ ಗುರಿತಿಸಿಕೊಂಡು ಸಮಾಜಮುಖಿಯಾಗಿ ಹೊರಹೊಮ್ಮಬೇಕು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತನ್ನ ಸ್ಥಾನಮಾನ ಗುರಿತಿಸಿಕೊಂಡು ಸಮಾಜಮುಖಿಯಾಗಿ ಹೊರಹೊಮ್ಮಬೇಕು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ನಗರದ ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸಬಲೀಕರಣವಾಗಬೇಕೆಂಬ ದೃಷ್ಟಿಯಿಂದ ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದಾಗ ಸಚಿವರಾಗಿದ್ದ ಮೋಟಮ್ಮ ಮಹಿಳೆಯರ ಪ್ರಗತಿಗಾಗಿ ಸ್ತ್ರೀಶಕ್ತಿ ಸಂಘಗಳನ್ನು ರಚನೆ ಮಾಡಬೇಕೆಂದಾಗ ಅಂದು ಜಾರಿಯಾದ ಸ್ತ್ರೀಶಕ್ತಿ ಸಂಘಗಳು ಇಂದಿಗೂ ಕಾರ್ಯನಿರ್ವಹಿಸುತ್ತಾ ಸಾವಿರಾರು ಮಹಿಳೆಯರು ಸಂಘಗಳ ಮೂಲಕ ಸ್ವಾವಲಂಭಿಗಳಾಗಿ ಕುಟುಂಬಗಳನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎಂ.ಎನ್. ಚೇತನ್‌ಕುಮಾರ್ ಮಾತನಾಡಿ, 2000ನೇ ಇಸವಿಯಲ್ಲಿ ಸ್ತ್ರೀಶಕ್ತಿ ಸಂಘಗಳು ರಚನೆಯಾಗಿದ್ದು ರಾಜ್ಯದಲ್ಲಿ 1.5 ಲಕ್ಷ ಸ್ತ್ರೀಶಕ್ತಿ ಸಂಘಗಳಿದ್ದು ಮಹಿಳೆಯರ ಆರ್ಥಿಕ ಪ್ರಗತಿಗೆ ಇವು ಸಹಕಾರಿಯಾಗಿವೆ. ಸಂಘಗಳ ಮೂಲಕ ಸಾಲಸೌಲಭ್ಯ ಪಡೆದು ಗೃಹಕೈಗಾರಿಕೆ ಅಥವಾ ಸ್ವಉದ್ಯೋಗಗಳನ್ನು ಕೈಗೊಂಡು ಸ್ವಾವಲಂಬಿ ಜೀವನ ನಡೆಸಿತ್ತಿದ್ದಾರೆ. ಸ್ತ್ರೀಶಕ್ತಿ ಸಂಘಗಳು ಎನ್‌ಆರ್‌ಎಂಎಲ್ ಅಡಿ ನೊಂದಾಯಿಸಿಕೊಂಡು ಮತ್ತಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.

ಸಿಡಿಪಿಒ ಲೋಕೇಶ್ ಮಾತನಾಡಿ, ಮಹಿಳೆಯರ ಸಬಲೀಕರಣವನ್ನು ಉದ್ದೇಶವಾಗಿಟ್ಟುಕೊಂಡು ಸರ್ಕಾರ ಜಾರಿಗೆ ತಂದ ಸ್ತ್ರೀಶಕ್ತಿ ಯೋಜನೆಯಡಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ತಾಲೂಕಿನಲ್ಲಿ 1080 ಸ್ತ್ರೀಶಕ್ತಿ ಗುಂಪುಗಳಿವೆ. ಬ್ಯಾಂಕ್ ಮತ್ತು ಗುಂಪಿನಿಂದ ಸಾಲ ಪಡೆದ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಭಿವೃದ್ದಿ ಪಥದತ್ತ ಸಾಗುತ್ತಿದ್ದಾರೆ ಎಂದರು.

ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಸುಮನಾ, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಪಿ. ರೇಖಾ, ಸೋಬಾನೆ ಪದಗಳ ಹಾಡುಗಾರ್ತಿ ಸಾವಿತ್ರಮ್ಮ ಇವರುಗಳನ್ನು ಸನ್ಮಾನಿಸಲಾಯಿತು. ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಎಂ. ಮಂಜುಳಾ, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಮೇಲ್ವಿಚಾರಕಿ ಬಿ.ಎನ್. ಪ್ರೇಮಾ ಭಾಗವಹಿಸಿದ್ದರು.