ಭಟ್ಕಳದ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಶ್ರೇಯಸ್ ನಾಯಕ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್‌ಗೆ ಭಾಜನರಾಗಿದ್ದಾರೆ.
ಭಟ್ಕಳ: ಇಲ್ಲಿಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಶ್ರೇಯಸ್ ನಾಯಕ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್‌ಗೆ ಭಾಜನರಾಗಿದ್ದಾರೆ.
ಶ್ರೇಯಸ್ ಕನ್ನಡ ಎಂ.ಎ. ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಮೊದಲ ರ್ಯಾಂಕ್ ಪಡೆಯುವ ಜತೆಗೆ ಒಂಬತ್ತು ಚಿನ್ನದ ಪದಕ, ಎರಡು ನಗದು ಪುರಸ್ಕಾರ ಪಡೆದಿದ್ದಾರೆ.ಮಲ್ಲಪ್ಪ ಯಲ್ಲಪ್ಪ ಕವಳಿ ಸ್ಮರಣಾರ್ಥ ಸುವರ್ಣ ಪದಕ, ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಸ್ವರ್ಣ ಪದಕ, ಡಾ. ಆರ್.ಸಿ. ಹಿರೇಮಠ ಚಿನ್ನದ ಪದಕ, ಪ್ರೊ. ಕೆ.ಜಿ. ಕುಂದಣಗಾರ ಚಿನ್ನದ ಪದಕ, ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಸ್ವರ್ಣ ಪದಕ, ಡಾ. ವಿಲ್ಯಂ ಮಾಡ್ತಾ ಗೋಲ್ಡ್ ಮೆಡಲ್, ಡಾ. ಗುರುಲಿಂಗ ಕಾಪಸೆ ಸುವರ್ಣ ಪದಕ, ಶ್ರೀ ಸಂಗಯ್ಯಸ್ವಾಮಿ ರಾಚಯ್ಯಸ್ವಾಮಿ ವಸ್ತ್ರದ ಚಿನ್ನದ ಪದಕ, ಮುರುಘಾಮಠದ ಮಹಾಂತ ಸ್ವಾಮಿ ಸುವರ್ಣ ಪದಕ -ಇವು ಶ್ರೇಯಸ್ ನಾಯಕ ಕೊರಳಿಗೇರಿದ ಚಿನ್ನದ ಪದಕಗಳಾಗಿವೆ. ಒಂಬತ್ತು ಸುವರ್ಣ ಪದಕಗಳ ಜತೆಗೆ ಈ ಪ್ರತಿಭಾನ್ವಿತ ವಿದ್ಯಾರ್ಥಿ ಇತರ ಎರಡು ಪುರಸ್ಕಾರಗಳನ್ನೂ ತನ್ನದಾಗಿಸಿಕೊಂಡಿದ್ದಾರೆ. ರೆವರೆಂಡ್ ಚೆನ್ನಪ್ಪ ಉತ್ತಂಗಿ ಜನ್ಮಶತಾಬ್ದಿ ಸ್ಮರಣಾರ್ಥ ಪುರಸ್ಕಾರ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಸ್ಮರಣಾರ್ಥ ಪುರಸ್ಕಾರಗಳು ಶ್ರೇಯಸ್ ಪಾಲಾಗಿವೆ.
ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಶ್ರೇಯಸ್ಸನಿಗೆ ಪ್ರಮಾಣಪತ್ರಗಳನ್ನು ನೀಡಿ ಪುರಸ್ಕರಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರು ಶ್ರೇಯಸ್ ಕೊರಳಿಗೆ ಚಿನ್ನದ ಪದಕಗಳನ್ನು ತೊಡಿಸಿದರು.ಪ್ರೊ. ಆರ್.ಎಸ್. ನಾಯಕ ಮತ್ತು ರೇಣುಕಾ ದಂಪತಿ ಪುತ್ರನಾದ ಶ್ರೇಯಸ್ ಸದ್ಯ ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.