ಶ್ರೀ ಬೆಟ್ಟಳ್ಳಿ ಮಾರಮ್ಮ ರಥ ಲೋಕಾರ್ಪಣೆಗೆ ಸಿದ್ಧ

| Published : Mar 31 2024, 02:00 AM IST

ಸಾರಾಂಶ

ಪಟ್ಟಣದ ಗ್ರಾಮದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಥ ಲೋಕಾರ್ಪಣೆಗೆ ಸಿದ್ಧವಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಗ್ರಾಮದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಥ ಲೋಕಾರ್ಪಣೆಗೆ ಸಿದ್ಧವಾಗಿದೆ.

ಶಿಲ್ಪ ಕಲೆಯ ನಿಪುಣ, ರಥ ತಯಾರಿಸುವ ಕಾಯಕದಲ್ಲಿ ನಿರತರಾದ ಮೈಸೂರು ಜಿಲ್ಲೆಯ ರಥಶಿಲ್ಪಿ ಜಿ ವೆಂಕಟೇಶ್ ಮೂರ್ತಿ‌ ಹಾಗೂ ಹತ್ತಾರು ಸಹಕಾಷ್ಠ ಶಿಲ್ಪ ಕಲಾವಿದರ ಕೈಯಲ್ಲಿ ಅರಳಿರುವ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ರಥ ನಿರ್ಮಾಣ ಕಾರ್ಯ ಮುಕ್ತಾಯ ಹಂತ ತಲುಪಿ ಅಂತಿಮ ಸ್ಪರ್ಶ ನೀಡಿದ್ದು, ಹಲವಾರು ತಲೆಮಾರುಗಳಿಂದ ಪಟ್ಟಣದ ಶಕ್ತಿ ದೇವತೆ ಶ್ರಿಬೆಟಳ್ಳಿ ಮಾರಮ್ಮನ ಭಕ್ತರ ತೇರು ನಿರ್ಮಾಣದ ಕನಸು ಈಗ ನನಸಾಗುತ್ತಿದೆ.

ರಥ ಶಿಲ್ಪಿಗಳಿಂದ ವಿನೂತನ ಮಾದರಿಯ ಸುಂದರವಾದ 4 ಚಕ್ರಗಳುಳ್ಳ ರಥವು ತಳಭಾಗದ ಅಚ್ಚುಗಡ್ಡಿ, ಕುದುರೆ, ಸಿಂಹ ಲಾಂಛನ ಸೇರಿ ಎಂಟು ಅಷ್ಟಕಂಬಗಳುಳ್ಳ 14.5ಅಡಿಯ‌ ಶ್ರೀ ಬೆಟ್ಟಳ್ಳಿ ಮಾರಮ್ಮನ ಪುಷ್ಪಕ ರಥವು ನೋಡುಗರ ಕಣ್ಮನ ಸೆಳೆಯುವಂತ ಶೈಲಿಯಲ್ಲಿ ಶಿಲ್ಪಗಳಿಂದ ಕೆತ್ತಲ್ಪಟ್ಟಿದೆ. ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯಕ್ಕೆ ನೆರೆಯ ತಮಿಳುನಾಡು ಹಾಗೂ ಬೆಂಗಳೂರು ಮೈಸೂರು ವಿವಿಧ ಜಿಲ್ಲೆಗಳಿಂದ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಕೂಡ ಭಕ್ತ ಸಮೂಹವೂ ಆಗಮಿಸಲಿದೆ.ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ ಅಲ್ಲದೆ ವಿಶೇಷ ಪೂಜಾ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಅಲ್ಲದೆ ಪ್ರತಿ ಮಂಗಳವಾರ ಮಧ್ಯಾಹ್ನ ಆಗಮಿಸುವ ಸಮಸ್ತ ಭಕ್ತರಿಗೆ ಹಲವು ವರ್ಷಗಳಿಂದ ದಾಸೋಹದ ವ್ಯವಸ್ಥೆಯನ್ನು ಸಹ ದೇವಾಲಯದ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಈ ಭಾರಿ ಜಾತ್ರಾ ಮಹೋತ್ಸವ ಏ. 1ರಂದು ರಾತ್ರಿ ಜಾಗರ ಸಮರ್ಪಣೆ, ಏ. 2ರಂದು ಮಂಗಳವಾರ ಮಧ್ಯಾಹ್ನ12ಘಂಟೆಗೆ ನೂತನವಾಗಿ ನಿರ್ಮಾಣಗೊಂಡಿರುವ ಪ್ರಥಮ ವರ್ಷದ ರಥೋತ್ಸವ ನಡೆಯಲಿದೆ. ಅದೇ ದಿನ ತಂಪುಜ್ಯೋತಿ ಏ. 3 ರ ಬುಧವಾರದಂದು ಹರಕೆ ಹೊತ್ತಭಕ್ತರಿಂದ ಭಾಯಿಬೀಗ ದೊಡ್ಡ ಬಾಯಿಬೀಗ ನಡೆಯಲಿದೆ. ಏ. 4ರಂದು ಗುರುವಾರ ಮುಂಜಾನೆ ಆಗ್ನಿ‌ಕುಂಡ ಪ್ರದರ್ಶನ ಜರುಗಲಿದೆ ಹೀಗೆ ನಾಲ್ಕು ದಿನಗಳ ಕಾಲ ಜಾತ್ರೆ ನೆಡೆಯುತ್ತಿದ್ದು ಜಾತ್ರಾ ಮಹೋತ್ಸವದ ಎರಡನೇ ದಿನ ನೂತನ ರಥೋತ್ಸವ ನಡೆಯಲಿದೆ.

ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಯ ಸಾನ್ನಿಧ್ಯದಲ್ಲಿ ಪ್ರಥಮ ವರ್ಷದ ನೂತನ ರಥೋತ್ಸವ ದೇವಿಯ ಆರ್ಶೀವಾದದೊಂದಿಗೆ ಪ್ರಥಮ ಭಾರಿಗೆ ನಡೆಸಲು ನಿರ್ಧಾರವಾಗಿದ್ದು ದೇವಿಯ ಅನುಗ್ರಹದಿಂದ ಭಕ್ತರ ಬೇಡಿಕೆಗಳು ಹಾಗೂ ಇಷ್ಟಾರ್ಥಗಳು ನೇರವೇರಲಿ ಸರ್ವರಿಗೂ ಒಳಿತಾಗಲಿ ಈ ಬಾರಿ ನಡೆಯುವ ಶ್ರೀಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಹೆಚ್ಚು ಭಕ್ತರು ಬರುವ ನೀರೀಕ್ಷೆ ಇದೆ.

-ರಾಜೂಜೀರಾವ್, ಪ್ರಧಾನ ಆರ್ಚಕರು