ಮೇ ೨೩ರಿಂದ ಶಿರಹಟ್ಟಿಯ ಶ್ರೀ ಫಕೀರೇಶ್ವರ ರಥೋತ್ಸವ

| Published : May 22 2024, 12:48 AM IST

ಸಾರಾಂಶ

ಇಸ್ಲಾಂ ಗುರುವಿನಿಂದ ದೀಕ್ಷೆ ಪಡೆದು ಫಕ್ಕೀರ ಚನ್ನವೀರ ಎಂಬ ಹೆಸರನ್ನು ಹೊತ್ತು ಧರ್ಮ ಜಾಗೃತಿಯಲ್ಲಿ ತೊಡಗಿದರು.

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಆಗಿ ಹುಣ್ಣಿಮೆಯ ದಿನವಾದ ಗುರುವಾರ ಮೇ ೨೩ರಂದು ಸಂಜೆ ೫ಕ್ಕೆ ಫಕೀರೇಶ್ವರ ಮಹಾರಥೋತ್ಸವ ಜರುಗಲಿದೆ.

ಮೇ ೨೪ರಂದು ಸಂಜೆ ೫ಕ್ಕೆ ಕಡುಬಿನ ಕಾಳಗ ನಡೆಯಲಿದ್ದು, ಮೇ ೨೮ರಂದು ಕಳಸ ಇಳಿಸುವ ಕಾರ್ಯಕ್ರಮ ಜರುಗಲಿದೆ.

ಮಾನವ ಕುಲಂ ಒಂದೇ ವಲಂ ಎಂಬ ಸಂದೇಶ, ದ್ವೇಷ ಬಿಟ್ಟು ಪ್ರೀತಿ ಮಾಡಿ ಎಂದು ಜಗತ್ತಿಗೆ ಸಾರಿದ ಶಿರಹಟ್ಟಿಯ ಶ್ರೀ ಫಕೀರೇಶ್ವರ ಮಠ ೧೫೭೦ರ ಸುಮಾರಿಗೆ ಚನ್ನವೀರ ಎಂಬ ಹಿಂದು ಶರಣರೊಬ್ಬರು ಹಜರತ್ ಖಾಜಾ ಅಮೀನುದ್ದೀನ್ ಎಂಬ ಸೂಫಿ ಸಂತರಲ್ಲಿ ಹಿಂದೂ ಮುಸ್ಲಿಂ ಎರಡು ಧರ್ಮದ ತತ್ವ ಅಭ್ಯಾಸ ಮಾಡಿ ಧರ್ಮ ಸಾಮರಸ್ಯದ ಮತ್ತು ಭಾವೈಕ್ಯ ಬೋಧನೆ ಕನ್ನಡ ನಾಡಿಗೆ ನೀಡಿದರು.

ಇಸ್ಲಾಂ ಗುರುವಿನಿಂದ ದೀಕ್ಷೆ ಪಡೆದು ಫಕ್ಕೀರ ಚನ್ನವೀರ ಎಂಬ ಹೆಸರನ್ನು ಹೊತ್ತು ಧರ್ಮ ಜಾಗೃತಿಯಲ್ಲಿ ತೊಡಗಿದರು. ಫಕೀರೇಶ್ವರರು ಅಂದಿನ ಮುಸ್ಲಿಂ ದೊರೆಗಳಂತೆ ರಾಜ ಪೋಷಾಕು ಧರಿಸುತ್ತಿದ್ದರು. ಶೈವರಂತೆ ಹಣೆಯಲ್ಲಿ ವಿಭೂತಿ, ಸಾಧಕರಂತೆ ಕೊರಳಲ್ಲಿ ರುದ್ರಾಕ್ಷಿ, ಯೋಗಿಗಳಂತೆ ಕಾಲಲ್ಲಿ ಪಾದುಕೆ ಮೆಟ್ಟುತ್ತಿದ್ದರು. ಶೈವರು ಶಿವನೆಂದು, ವೈಷ್ಣವರು ಹರನೆಂದು, ಮುಸ್ಲಿಂಮರು ಪೈಗಂಬರರೆಂದು ಸಂಬೋಧಿಸುತ್ತಿದ್ದರು.

ಎಲ್ಲರಲ್ಲಿಯೂ ದೇವರಿದ್ದಾನೆ. ಎಲ್ಲವನ್ನು, ಎಲ್ಲರನ್ನೂ ಪ್ರೀತಿಸು, ಗೌರವಿಸು ವಿಶ್ವ ಪ್ರೇಮವೇ ವಿಶ್ವೇಶ್ವರನ ಆರಾಧನೆ ಎಂದರು. ದ್ವೇಷ ಬಿಡು- ಪ್ರೀತಿ ಮಾಡು ಎಂಬ ದಿವ್ಯ ಸಂದೇಶ ಜಗತ್ತಿಗೆ ಸಾರಿದರು. ಮಕ್ಕಳಿಲ್ಲದ ಅಕ್ಬರನಿಗೆ ಶೀಘ್ರ ಸಂತಾನವಾಗುವ ಭವಿಷ್ಯ ನುಡಿದು ನಿಜವಾಗಿಸಿದ ವಿದ್ವತ್ತು, ವಿಶ್ವ ಪ್ರೇಮ, ಧರ್ಮಸಮನ್ವಯ ಭಾವದಿಂದ ವಿಶ್ವ ಪ್ರೇಮ ಧರ್ಮಕ್ಕೆ ಜಯವಾಗಲಿ ಎಂದು ಭೋದನೆಗೈದ ಮಹಾನುಭಾವರು.

ಶಾಂತಿಯುತ ಸಹಬಾಳ್ವೆ ಹೊಂದುವುದೇ ಜೀವನದ ಗುರಿ. ದೇವರು ಒಬ್ಬನೇ. ಅವರು ಹೊಂದುವ ಧರ್ಮ ಒಂದೇ. ಪ್ರೇಮದಿಂದ ಬಾಳುವುದೇ ನಿಜವಾದ ಧರ್ಮ ಮುಂತಾದ ಸಿದ್ಧಾಂತಗಳನ್ನು ಜನರಲ್ಲಿ ಜಾಗೃತಗೊಳಿಸಿದರು. ದೇಶ ಸಂಚಾರಗೈಯುತ್ತಾ ೧೬೧೦ರ ಸುಮಾರಿಗೆ ಶಿರಹಟ್ಟಿಗೆ ಆಗಮಿಸಿದ ಅವರು, ಇಲ್ಲಿನ ಪಾವನ ಭೂಮಿಯನ್ನು ತಮ್ಮ ಶಾಶ್ವತ ನೆಲೆಯಾಗಿಸಿಕೊಂಡರು. ಡೊಂಬರ ಹುಡುಗ ಸಿದ್ದರಾಮನನ್ನು ತಮ್ಮ ಶಿಷ್ಯನನ್ನಾಗಿಸಿಕೊಂಡ ಫಕೀರೇಶ್ವರರು ಧರ್ಮದ ತಿರುಳು,ಸಾಮಾಜಿಕ ನೀತಿ ನಿಲುವುಗಳ ಶಿಕ್ಷಣ ನೀಡಿದರು.

ಫಕೀರೇಶ್ವರರ ದೇಹ ತ್ಯಾಗವು ಎಂದೂ ಮರೆಯದ ರೋಮಾಂಚನ ಘಟನೆ. ಈ ಜಗದ ನಿಯಮದಂತೆ ಫಕೀರೇಶ್ವರರು ತಮ್ಮ ಪಂಚಭೂತಾತ್ಮಕ ಶರೀರವನ್ನು ಪಂಚಭೂತಗಳಿಗೆ ಹಂಚಿಕೊಳ್ಳಲಿಲ್ಲ. ಅವರ ಅಂತ್ಯ ಸಂಸ್ಕಾರ ನಡೆಯಲೇ ಇಲ್ಲ. ಅಲ್ಲಮನು ಗುಹೆಯಲ್ಲಿ ಹೊಕ್ಕು ಬಯಲಾದಂತೆ, ಅಕ್ಕಮಹಾದೇವಿ ಕದಳಿಯಲ್ಲಿ ಬಯಲಾದಂತೆ ಫಕೀರೇಶ್ವರರು ಎಲ್ಲರೂ ನೋಡು ನೋಡುತ್ತಿದ್ದಂತೆ ಸರ್ಪವಾಗಿ ಹುತ್ತ ಸೇರಿದರು. ನಂತರ ಅವರು ಎಂದೂ ಮರಳಿ ಬರಲೇ ಇಲ್ಲ. ಆ ಹುತ್ತವೇ ಇಂದಿಗೂ ಅವರ ಸಮಾದಿಯಾಗಿದೆ.

ಇಂದಿಗೆ ಫಕೀರೇಶ್ವರರು ಸಂದು ನಾಲ್ಕು ಶತಮಾನಗಳಾದರೂ ಸಹ ಅವರು ಜೀವಂತವಾಗಿದ್ದಾರೆ. ಅಂದಿನಿಂದ ಇಂದಿನ ವರೆಗೂ ಹಿಂದುಗಳು ಫಕೀರಪ್ಪ, ಫಕೀರೇಶ, ಫಕೀರಗೌಡ ಎಂದು ತಮ್ಮ ಮಕ್ಕಳಿಗೆ ಹೆಸರಿಟ್ಟರೆ ಮುಸಲ್ಮಾನರು ಫಕೀರಸಾಬ ಎಂದು ಕರೆದು ಗುರುವಿನ ಸ್ಮರಣೆ ಮಾಡುತ್ತಾರೆ. ಒಂದನೆಯ ಸಿದ್ದರಾಮ ಶ್ರೀಗಳು ಶ್ರೀಮಠದಲ್ಲಿ ಕಮಾನು ಬಾವಿ ಕಟ್ಟಿಸಿ ಶಿರಹಟ್ಟಿಯ ನೀರಿನ ಬರವನ್ನು ಶಾಶ್ವತವಾಗಿ ದೂರ ಮಾಡಿದರು.

ಎರಡನೇ ಸ್ವಾಮಿಜಿ ಕತೃ ಗದ್ದುಗೆ ಕಟ್ಟಿಸಲು ಪ್ರಾರಂಭಿಸಿದರು.೧೩ನೇ ಪಟ್ಟಾಧ್ಯಕ್ಷರಾಗಿ ಮಲ್ಲಿಕಾರ್ಜುನ ಮರಿದೇವರು ಫಕೀರ ಸಿದ್ದರಾಮ ಎಂಬ ನಾಮದಿಂದ ಕರೆಸಿಕೊಂಡು ೧೯೮೮ರಲ್ಲಿ ಪಟ್ಟಕ್ಕೆ ಬಂದ ತರುವಾಯ ನಾಡಿನಾದ್ಯಂತ ಶ್ರೀ ಮಠದ ಹೆಸರನ್ನು ಮತ್ತು ಮಠವನ್ನು ಭಕ್ತರ ಆಶ್ರಯ ತಾಣವನ್ನಾಗಿ ಮಾಡಿದರು. ಪಟ್ಟವನ್ನಲಂಕರಿಸಿದಾಗಿನಿಂದ ಇಂದಿನವರೆಗೂ ಶ್ರೀ ಮಠದ ಅಭಿವೃದ್ಧಿಗಾಗಿ, ಸೇವೆಗಾಗಿ ಹಗಲಿರುಳು ಎನ್ನದೇ ಭಕ್ತರ ಮನೆಮನೆಗೆ ಹೋಗಿ ಸಾಮರಸ್ಯದ ಬದುಕಿನ ಸಂದೇಶ ಸಾರುತ್ತಾ ಮಠವನ್ನು ಮುನ್ನಡೆಸುತ್ತಿದ್ದಾರೆ.