ಮೈಸೂರು ನಾಗರಾಜ್, ಮೈಸೂರು ಮಂಜುನಾಥ್ ಸಹೋದರರಿಗೆ ಶ್ರೀ ಜಯೇಂದ್ರ ಸರಸ್ವತಿ ರಾಷ್ಟ್ರೀಯ ಪುರಸ್ಕಾರ

| Published : Dec 05 2024, 12:33 AM IST

ಮೈಸೂರು ನಾಗರಾಜ್, ಮೈಸೂರು ಮಂಜುನಾಥ್ ಸಹೋದರರಿಗೆ ಶ್ರೀ ಜಯೇಂದ್ರ ಸರಸ್ವತಿ ರಾಷ್ಟ್ರೀಯ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 8 ರಂದು ಮುಂಬೈನ ಶ್ರೀ ಷಣ್ಮುಖಾನಂದ ಹಾಲ್‌ನಲ್ಲಿ ನಡೆಯಲಿದೆ. ಈ ರಾಷ್ಟೀಯ ಪ್ರಶಸ್ತಿ ಪಡೆಯುತ್ತಿರುವ ಮೊಟ್ಟ ಮೊದಲ ಕನ್ನಡಿಗ ಕಲಾವಿದರು ಎಂಬ ಹೆಗ್ಗಳಿಕೆಗೆ ಈ ಸಹೋದರರು ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಖ್ಯಾತ ವಯೊಲಿನ್ ವಾದಕರಾದ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಅವರು ಮುಂಬೈನ ಪ್ರತಿಷ್ಠಿತ ಷಣ್ಮುಖಾನಂದ ಫೈನ್ ಆರ್ಟ್ಸ್ ನಿಂದ "ಶ್ರೀ ಜಯೇಂದ್ರ ಸರಸ್ವತಿ ರಾಷ್ಟ್ರೀಯ ಪುರಸ್ಕಾರ " ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 8 ರಂದು ಮುಂಬೈನ ಶ್ರೀ ಷಣ್ಮುಖಾನಂದ ಹಾಲ್‌ನಲ್ಲಿ ನಡೆಯಲಿದೆ. ಈ ರಾಷ್ಟೀಯ ಪ್ರಶಸ್ತಿ ಪಡೆಯುತ್ತಿರುವ ಮೊಟ್ಟ ಮೊದಲ ಕನ್ನಡಿಗ ಕಲಾವಿದರು ಎಂಬ ಹೆಗ್ಗಳಿಕೆಗೆ ಈ ಸಹೋದರರು ಭಾಜನರಾಗಿದ್ದಾರೆ. ಈ ಹಿಂದಿನ ಪ್ರಶಸ್ತಿ ಪುರಸ್ಕೃತರು - ಪದ್ಮಭೂಷಣ ಟಿ.ವಿ. ಗೋಪಾಲಕೃಷ್ಣನ್, ಪದ್ಮವಿಭೂಷಣ ಟಿ.ವಿ. ಶಂಕರ ನಾರಾಯಣ, ಪದ್ಮಶ್ರೀ ಡಾ. ಎನ್. ರಮಣಿ, ಪ್ರೊ ಟಿ.ಎನ್. ಕೃಷ್ಣನ್ ಹಾಗೂ ಎಲ್ ಸುಬ್ರಹ್ಮಣ್ಯಂ .ಅಸಾಧಾರಣ ತಾಂತ್ರಿಕ ಪಾಂಡಿತ್ಯ, ಭಾವಗಾಂಭೀರ್ಯ ಮತ್ತು ವಿಶಿಷ್ಟ ಸಂಗೀತ ಶೈಲಿಗೆ ಹೆಸರುವಾಸಿಯಾಗಿರುವ ಮೈಸೂರು ನಾಗರಾಜ್- ಡಾ.ಮೈಸೂರು ಮಂಜುನಾಥ್ ಅವರು ವಿಶ್ವದಾದ್ಯಂತ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ತಮ್ಮ ತಂದೆ ಎಸ್. ಮಹದೇವಪ್ಪ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಸಹೋದರರು ಇಂದು ಭಾರತೀಯ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರಾಗಿ ವಿಶ್ವ ಮನ್ನಣೆ ಗಳಿಸಿ, ತಮ್ಮ ನವೀನ ವಯೋಲಿನ್ ಶೈಲಿಯಿಂದ ಎಲ್ಲ ವಿಮರ್ಶಕರ ಪ್ರಶಂಸೆ ಗಳಿಸಿದ್ದಾರೆ. ಅವರ ಮೋಹಕ ಜುಗಲ್‌ ಬಂದಿ ಪ್ರದರ್ಶನಗಳು, ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಚೇರಿಗಳು, ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಗಳಲ್ಲಿ ಅಸಂಖ್ಯಾತ ಕಾರ್ಯಾಗಾರಗಳು ಮತ್ತು ವಿವಿಧ ಸಂಗೀತಗಾರರೊಂದಿಗಿನ ಸಹಯೋಗಗಳು ಸಂಗೀತ ಕ್ಷೇತ್ರದಲ್ಲಿ ಮೈಸೂರು ಸಹೋದರರನ್ನು ಪ್ರಮುಖ ವ್ಯಕ್ತಿಗಳಾಗಿ ಅವರ ಸ್ಥಾನವನ್ನು ಬಲಪಡಿಸಿದೆ. ಮೈಸೂರು ಸಹೋದರರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ಚೂಡಾಮಣಿ, ಸಂಗೀತ ಸಾಮ್ರಾಟ್, ಸಂಗೀತ ವಿದ್ವಾನ್ಮಣಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಇದು ಭಾರತೀಯ ಶಾಸ್ತ್ರೀಯ ಸಂಗೀತದ ಸಮೃದ್ಧ ಪರಂಪರೆಗೆ ಅವರ ಗಣನೀಯ ಕೊಡುಗೆಯನ್ನು ಗುರುತಿಸುತ್ತದೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇಬ್ಬರು ಹೆಮ್ಮೆಯ ಕಲಾವಿದರಾಗಿ ,ಮುಂದಿನ ಪೀಳಿಗೆಯ ಸಂಗೀತಗಾರರಿಗೆ ಸ್ಫೂರ್ತಿಯಾಗಿ, ವಿಶ್ವದಾದ್ಯಂತದ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದಾರೆ.